ಮೈಸೂರು: ಕರ್ನಾಟಕ ಜಾನಪದ ಪರಿಷತ್ತಿನ ನೂತನ ಆಡಳಿತ ಮಂಡಳಿ ಸದಸ್ಯರಾಗಿದ್ದ ಹೆಸರಾಂತ ಜಾನಪದ ವಿದ್ವಾಂಸ, ಶಿಕ್ಷಣತಜ್ಞ ಪ್ರೊ.ಎಂ.ಜಿ.ಈಶ್ವರಪ್ಪ ಇವರ ನಿಧನಕ್ಕೆ ಜಾನಪದ ಲೋಕದಲ್ಲಿ ಸಂತಾಪ ಸಲ್ಲಿಸಲಾಯಿತು. ಸಂತಾಪ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ,ಬೋರಲಿಂಗಯ್ಯರವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದಾಗಿನ ಒಡನಾಟವನ್ನು ನೆನಪಿಸಿದರು.
ಕೃಷಿ ಜಾನಪದ ಮತ್ತು ಜಾನಪದ ರಂಗಭೂಮಿ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಸಜ್ಜನ ಜಾನಪದ ವಿದ್ವಾಂಸ ಈಶ್ವರಪ್ಪ. ಇವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬವರ್ಗದವರಿಗೆ ದುಃಖವನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಶಿ.ರಾಮಚಂದ್ರೇಗೌಡ ತಮ್ಮ ವಿದ್ಯಾರ್ಥಿ ಜೀವನದ ಸಹಪಾಠಿಯೊಂದಿಗಿನ ದಿನಗಳನ್ನು ಮೆಲುಕು ಹಾಕಿದರು. ಮೈಸೂರಿನ ಶಿವರಾತ್ರೀಶ್ವರ ಮಠದ ಹಾಸ್ಟೆಲ್ ದಿನಗಳನ್ನು ನೆನೆದರು. ಮಧ್ಯ ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾದ ದಾವಣಗೆರೆಯಲ್ಲಿ ಬಸವರಾಜು ನೆಲ್ಲಿಸರ ಜೊತೆಗೂಡಿ ಈಶ್ವರಪ್ಪ ಮಾತೃತ್ವದ ಪರಿಕಲ್ಪನೆಯ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರಲ್ಲಿ ವಹಿಸಿದ ಪಾತ್ರವನ್ನು ತಿಳಿಸಿದರು.
ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಮಾನಾಪುರ, ಕಾರ್ಯನಿರ್ವಹಣಾಧಿಕರಿ ಸರಸವಾಣಿ, ಕ್ಯೂರೇಟರ್ ಡಾ.ರವಿ ಯು.ಎಂ, ಜಾನಪದ ಲೋಕದ ಸಿಬ್ಬಂದಿಗಳು, ಡಿಪ್ಲಮೊ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಂತಾಪ ಸೂಚಿಸಿದರು.