Monday, April 21, 2025
Google search engine

Homeರಾಜ್ಯಸುದ್ದಿಜಾಲಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಿರಿಯ ನಟ ದ್ವಾರಕೀಶ್ ನಿಧನಕ್ಕೆ ಸಂತಾಪ

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಿರಿಯ ನಟ ದ್ವಾರಕೀಶ್ ನಿಧನಕ್ಕೆ ಸಂತಾಪ

ಚನ್ನಪಟ್ಟಣ: ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಹೃದಯಾಘಾತದಿಂದ ವಿಧಿವಶರಾಗಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದರು. ಖ್ಯಾತ ನಿರ್ಮಾಪಕ, ನಿರ್ದೇಶಕ, ಡಾ. ದ್ವಾರಕೀಶ್‌ರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕಕಜವೇದಿಕೆ ರಾಜ್ಯಾಧ್ಯಕ್ಷ ಮಾತನಾಡಿ ನಿರ್ದೇಶಕರಾಗಿ, ನಿರ್ಮಾಪಕರಾಗಿ, ಹಾಸ್ಯ ನಟರಾಗಿದ್ದ ದ್ವಾರಕೀಶ್‌ರವರು ಮರಣ ಹೊಂದಿದ್ದು ಕನ್ನಡ ಚಲನಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದರು. ಇಂತಹ ಮಹಾನ್ ವ್ಯಕ್ತಿ ಚಿತ್ರರಂಗಕ್ಕೆ ಇನ್ನಿಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವಾರು ದಿಗ್ಗಜರ ಜೊತೆ ಚಿತ್ರಗಳಲ್ಲಿ ನಟನೆ ಮಾಡಿದವರು ಇಂದು ಚಿರ ನಿದ್ರೆಗೆ ತೆರಳಿದ್ದಾರೆ ಎಂದರು.

ದ್ವಾರಕೀಶ್ ೧೯೪೨ರ ಆಗಸ್ಟ್ ೧೯ರಂದು ಹುಣಸೂರು ನಲ್ಲಿ ಜನಿಸಿದರು. ಅವರು ಮೈಸೂರಿನ ಇಟ್ಟಿಗೆಗೂಡಿನಲ್ಲಿ ಬೆಳೆದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಿಲಾಸ್ ಮತ್ತು ಬನುಮಯ್ಯ ಅವರ ಶಾಲೆಯಲ್ಲಿ ಪಡೆದರು ಮತ್ತು ಸಿಪಿಸಿ ಪಾಲಿಟೆಕ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಪಡೆದರು,ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ದ್ವಾರಕೀಶ್ ಮತ್ತು ಅವರ ಸಹೋದರ ಮೈಸೂರಿನ ಗಾಂಧಿ ಚೌಕದಲ್ಲಿ “ಭಾರತ್ ಆಟೋ ಸ್ಪೇರ್ಸ್? ಎಂಬ ಆಟೋಮೋಟಿವ್ ಬಿಡಿಭಾಗಗಳ ವ್ಯವಹಾರವನ್ನು ಪ್ರಾರಂಭಿಸಿದರು.

ಅವರು ನಟನೆಯತ್ತ ಬಲವಾಗಿ ಆಕರ್ಷಿತರಾದರು ತಮ್ಮ ಸೋದರಮಾವ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರನ್ನು ಚಲನಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ೧೯೬೩ ರಲ್ಲಿ, ಅವರು ವ್ಯವಹಾರವನ್ನು ತೊರೆದು ಚಲನಚಿತ್ರಗಳಲ್ಲಿ ನಟಿಸಲು ನಿರ್ಧರಿಸಿದ್ದರು. ಇವರು ಹಾಸ್ಯನಟರಾಗಿ ಪ್ರತಿಷ್ಠಿತ ನಟ ರಾಜ್ ಕುಮಾರ್‌ರವರಿಂದ ಮೊದಲ್ಗೊಂಡು ಅನೇಕರ ಜೊತೆಯಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಅವರು ನಿರ್ಮಾಪಕರಾಗಿಯೂ ಸಹ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವುದು ಗಮನಾರ್ಹ ಎಂದರು.

೧೯೮೫ರಲ್ಲಿ ನೀ ಬರೆದ ಕಾದಂಬರಿ ಎಂಬ ಚಿತ್ರಕ್ಕೆ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟರು. ಇದು ಸೂಪರ್ ಹಿಟ್ ಆಗಿತ್ತು. ಡಾನ್ಸ್ ರಾಜ ಡಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ವಿಷ್ಣು ವರ್ಧನ್ ಮತ್ತು ದ್ವಾರಕೀಶ್ ಜೋಡಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯ ನೀಡಿದ್ದಾರೆ.ಸೂಪರ್ ಹಿಟ್ ಚಿತ್ರಗಳೆಂದರೆ ಆಪ್ತಮಿತ್ರ,ಕಳ್ಳ ಕುಳ್ಳ,ಕಿಲಾಡಿಗಳು,ಸಿಂಗಾಪುರದಲ್ಲಿ ರಾಜ ಕುಳ್ಳ, ಕಿಟ್ಟು ಪುಟ್ಟು ಚಿತ್ರಗಳು.
ದ್ವಾರಕೀಶ್ ಚಿತ್ರ ಅನ್ನುವ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿ ಅದರಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಇವರು ನಿರ್ಮಾಣ ಮಾಡಿದ ಸಿನಿಮಾಗಳು ಇಂದು ಸೂಪರ್ ಹಿಟ್ ಆಗಿದೆ. ಹಲವು ನಟರನ್ನು ಸ್ಟಾರ್ ನಟರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಇವೆಲ್ಲಕ್ಕೂ ಮಿಗಿಲಾಗಿ ದ್ವಾರಕೀಶ್ ತಾವು ನಿರ್ಮಾಪಕರಾಗಿ ಯಶಸ್ವಿಯಾಗಿದ್ದ ದಿನಗಳಲ್ಲಿ ಕಲಾವಿದರನ್ನು ಅತ್ಯಂತ ಗೌರವಯುತವಾಗಿ, ಶಿಸ್ತು ಗೌರವಗಳಿಂದ, ಸಂಭಾವನೆಗಳಿಂದ ಯೋಗ್ಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುದು ಚಿತ್ರರಂಗದಲ್ಲಿ ಜನಜನಿತವಾಗಿತ್ತು. ಹಾಗಾಗಿ ಹಾಸ್ಯನಟ ಮಾತ್ರರಾಗಿದ್ದರೂ ಅವರೊಂದಿಗೆ ನಾಯಕನಟಿಯರಾಗಿ ನಟಿಸಲು ಮಂಜುಳಾ, ರಾಧಿಕಾ, ಜಯಚಿತ್ರಾ ಅಂತಹ ಪ್ರಸಿದ್ದ ತಾರೆಯರು ಕೂಡಾ ಹಿಂದು ಮುಂದೆ ನೋಡಲಿಲ್ಲ ಎಂಬುದು ಅತಿಮುಖ್ಯವಾದ ಅಂಶವಾಗಿದೆ. ಅಂದು ದ್ವಾರಕೀಶ್ ತಮ್ಮ ನೆಗೆಟಿವ್ ಅಂಶಗಳನ್ನು ತಾವೇ ಅಣಕಿಸುತ್ತಾ, ಅದನ್ನೇ ತನ್ನ ಪಾಸಿಟಿವ್ ಶಕ್ತಿಗಳನ್ನಾಗಿ ಮಾಡಿಕೊಂಡು ಮೇಲೆ ಬಂದವರು. ನಾನು ಎತ್ತರವಿಲ್ಲ, ಕುಳ್ಳ ನನಗೆ ಬುದ್ದಿ ಬೆಳೆದಿಲ್ಲ ಹಾಗಾಗಿ ಪೆದ್ದ ಮಾತು ಸರಿಯಾಗಿ ಆಡೋಲ್ಲ ಹಾಗಾಗಿ ಮೊದ್ದು, ಮೂಗು ಸರಿ ಇಲ್ಲ ಹಾಗಾಗಿ ಸೊಟ್ಟ ಸುಂದರತೆ ಇಲ್ಲ ಜೀರೋ ಹೀಗೆ ಅವರು ತಮ್ಮನ್ನು ತಾವೇ ಗುರುತಿಸಿಕೊಂಡು, ಅದನ್ನೇ ತಮ್ಮ ಚಿತ್ರದ ವಸ್ತುವನ್ನಾಗಿಸಿಕೊಂಡು ಒಂದೊಂದೇ ಮೆಟ್ಟಿಲು ನಿರ್ಮಿಸಿಕೊಂಡು ಮೇಲೇರಿದರು.

ವೀರ ಸಂಕಲ್ಪ, ಸತ್ಯ ಹರಿಶ್ಚಂದ್ರ, ಪರೋಪಕಾರಿ,ಕ್ರಾಂತಿ ವೀರ, ಮೇಯರ್ ಮುತ್ತಣ್ಣ,ದೂರದ ಬೆಟ್ಟ, ಗಾಂಧೀನಗರ,ಬಾಳು ಬೆಳಗಿತು. ಬಂಗಾರದ ಮನುಷ್ಯ,ಬಹದ್ದೂರ್ ಗಂಡು,ಹೀಗೆ ನೀವು ಅಂದಿನ ಬಹಳಷ್ಟು ಚಿತ್ರಗಳಲ್ಲಿ ರಾಜ್ ಕುಮಾರ್ – ದ್ವಾರಕೀಶ್ ಜೋಡಿಯನ್ನು ಮೆಚ್ಚುಗೆಯಿಂದ ಕಾಣಬಹುದಿತ್ತು. ಇಷ್ಟೆಲ್ಲಾ ಕೊಡುಗೆ ಕೊಟ್ಟಿರುವಂತಹ ದ್ವಾರಕೀಶ್‌ರವರನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಕುಟುಂಬಸ್ಥರಿಗೆ ಸಾಂತ್ವನ ಶಕ್ತಿ ನೀಡಲಿ ಎಂದರು.

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ರವರ ನಿಧನಕ್ಕೆ ಚನ್ನಪಟ್ಟಣದ ಕಾವೇರಿ ಸರ್ಕಲ್ ನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷರು ಬೇವೂರು ಯೋಗೀಶ್‌ಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ರಂಜಿತ್‌ಗೌಡ, ಬೆಳಕು ಶ್ರೀಧರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಮಂಗಳಮ್ಮ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ರ್‍ಯಾಂಬೋ ಸೂರಿ, ವಕೀಲರಾದ ರವಿ ವಳಗೆರೆದೊಡ್ಡಿ, ಉಮೇಶ್, ಮಹೇಶ್ ಬಲ್ಲಾಪಟ್ಟಣ, ಬಾಬು ಮಂಗಳವಾರಪೇಟೆ, ಕೋಟಮಾರನಹಳ್ಳಿ ಉಮೇಶ್, ಕೃಷ್ಣಪ್ಪ ಸುಳ್ಳೇರಿ, ಶ್ರೀಕಾಂತ್, ರೇವಣ್ಣ, ಪುನೀತ್, ಕಳ್ಳಿಹೊಸೂರು ಯಶ್ವಂತ್, ಪುರಿಸಿದ್ದಪ್ಪ, ದೊಡ್ಡೇಗೌಡ, ಶಿವು, ವೆಂಕಟೇಶ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular