ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠದ ಆಡಳಿತ ನಿರ್ವಹಣೆ, ಮಾಹಿತಿ ಮತ್ತು ಅಂಕಿಅಂಶಗಳ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಹೆಚ್.ಎಸ್.ನಾಗರಾಜ್ ಅವರು ಜು.೨೯ರಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದು, ಅವರ ನಿಧನಕ್ಕೆ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಭಾಂಗಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ನಾಗರಾಜ್ ಅವರು ರಾಜ್ಯ ಸರ್ಕಾರದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಉಪನಿರ್ದೇಶಕರಾಗಿ, ಜನಸಂಖ್ಯಾಶಾಸ್ತ್ರಜ್ಞರಾಗಿ, ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ನಿರ್ದೇಶಕರಾಗಿ ನಿವೃತ್ತಿಯ ನಂತರ ಬೆಂಗಳೂರಿನ ಜೆಎಸ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ (ಜಸ್ಟೀಸ್) ಸಂಯೋಜನಾಧಿಕಾರಿಗಳಾಗಿಯೂ, ನಂತರ ೨೦೦೭ರಿಂದ ೨೦೧೯ರವರೆಗೆ ಜೆಎಸ್‌ಎಸ್ ಮಹಾವಿದ್ಯಾಪೀಠ ದಲ್ಲಿ ಆಡಳಿತ ನಿರ್ವಹಣೆ, ಮಾಹಿತಿ ಮತ್ತು ಅಂಕಿಅಂಶಗಳ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ ಅವರು ಬಾಲ್ಯದಿಂದ ಸೇವಾವಧಿಯವರೆಗೂ ಉತ್ತಮ ಒಡನಾಟ ಹೊಂದಿದ್ದು, ಸರ್ಕಾರ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಶಿಸ್ತುಬದ್ದವಾಗಿ ಸೇವೆಯನ್ನು ಸಲ್ಲಿಸಿದ್ದರು ಎಂದು ಅವರ ಸೇವೆ ಸ್ಮರಿಸಿದರು.
ಹಣಕಾಸು ವಿಭಾಗದ ನಿರ್ದೇಶಕ ಎಸ್. ಪುಟ್ಟಸುಬ್ಬಪ್ಪ ಸುಮಾರು ೪೦ ವರ್ಷಗಳ ಒಡನಾಟ, ಬಾಂಧವ್ಯವಿದ್ದು ಸರ್ಕಾರದ ನಿಯಮಾಳಿಗಳಂತೆ ಸಂಘ ಸಂಸ್ಥೆಗಳು ನಿಯಮಾವಳಿಗಳನ್ನು ರೂಪಿಸಲು ನೆರವಾಗುತ್ತಿದ್ದರು. ಅವರ ನಿಧನದಿಂದ ವೈಯಕ್ತಿಕವಾಗಿಯೂ ನಷ್ಟವಾಗಿದೆ ಎಂದರು.
ಪ್ರಕಟಣ ವಿಭಾಗದ ನಗರ್ಲೆ ಶಿವಕುಮಾರ ಅವರು, ಕೆಲಸದ ವಿಚಾರದಲ್ಲಿ ಶಿಸ್ತುಬದ್ದವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸಹೋದ್ಯೋಗಿಗಳು ಹಾಗೂ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು ಎಂಬುದನ್ನು ನೆನೆದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ರೀತಿಯಲ್ಲಿಯೆ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಅವರ ಬರವಣಿಗೆಯ ಅಚ್ಚುಕಟ್ಟುತನ ಇತರರಿಗೆ ಮಾದರಿಯಾಗಿತ್ತು ಎಂದು ಸ್ಮರಿಸಿದರು.
ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ, ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ, ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ರೇವಣ್ಣಸ್ವಾಮಿ, ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ರಾಜಶೇಖರ್, ಕಾಲೇಜು ವಿಭಾಗದ ನಿರ್ದೇಶಕ ಮೂಗೇಶಪ್ಪ, ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮತ್ತು ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.