ಮಂಗಳೂರು (ದಕ್ಷಿಣ ಕನ್ನಡ): ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಿಂದ 8ರಿಂದ 14 ವರ್ಷ ಪ್ರಾಯದೊಳಗಿನ 85 ಮಂದಿ ಅನಾಥ ಮಕ್ಕಳೊಂದಿಗೆ (ಬಾಲಕ-ಬಾಲಕಿಯರು) ಸಾಂತ್ವನ ಸಂಚಾರ ಕಾರ್ಯಕ್ರಮವನ್ನು ಮಂಗಳೂರು ನಗರ ಮತ್ತು ಹೊರವಲಯದಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.
ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಕೂಳೂರಿನ ಖಾಸಗಿ ಹೊಟೇಲೊಂದರಲ್ಲಿ ಸಾಂತ್ವನದ ಸಂಚಾರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಬಳಿಕ ಮಧ್ಯಾಹ್ನದವರೆಗೆ ಪಿಲಿಕುಳ ನಿಸರ್ಗಧಾಮದ ವೀಕ್ಷಣೆಯ ಭಾಗ್ಯ ನೀಡಲಾಯಿತು. ಪ್ರಾಣಿ ಸಂಗ್ರಹಾಲಯದಲ್ಲಿ ಸುತ್ತಾಟ, ವಿಜ್ಞಾನ ಕೇಂದ್ರ ವೀಕ್ಷಣೆ ಮತ್ತು ತಾರಾಲಯದಲ್ಲಿ 3ಡಿ ವೀಕ್ಷಣೆ ವ್ಯವಸ್ಥೆ ಮಾಡಲಾಯಿತು. ಮಧ್ಯಾಹ್ನದ ಬಳಿಕ ಕುತ್ತಾರಿನ ರೆಸಾರ್ಟ್‌ನಲ್ಲಿ ಸುತ್ತಾಡಿಸಲಾಯಿತು. ಅಲ್ಲೇ ವಿವಿಧ ಆಟೋಟ ಸ್ಪರ್ಧೆ ಮತ್ತು ಮನರಂಜನಾ ಚಟುವಟಿಕೆಗಳು, ಮ್ಯಾಜಿಕ್ ಶೋ ನಡೆಸಲಾಯಿತು. ಅಲ್ಲದೆ 85 ಮಕ್ಕಳಿಗೂ ತಲಾ 10 ಸಾವಿರ ರೂ. ಮೌಲ್ಯದ ಆಹಾರದ ಕಿಟ್ ವಿತರಿಸಲಾಯಿತು. ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾರೋಪ ಮಾಡಲಾಯಿತು.