ಗುಂಡ್ಲುಪೇಟೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಬಯಸಿದ್ದು, ಟಿಕೆಟ್ ದೊರೆಯುವ ವಿಶ್ವಾಸವಿದೆ ಎಂದು ಬಿಜೆಪಿ ಮುಖಂಡ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಛಲವಾದಿ ಸಂಘಟನೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಛಲವಾದಿ ಸಂಘಟನೆ ಇದ್ದರೂ ಸಕ್ರೀಯವಾಗಿಲ್ಲ. ಆದ್ದರಿಮದ ಜಿಲ್ಲೆಯಾದ್ಯಂತ ಜನಾಂಗದವರನ್ನು ಒಗ್ಗೂಡಿಸಿ ಮತ್ತೇ ಮರು ಚಾಲನೆ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಮೊದಲು ಸದಸ್ಯರುಗಳ ಸದಸ್ಯತ್ವ ನೋಂದಣಿ ಮಾಡಿಸಿ ನಂತರ ಅಧ್ಯಕ್ಷ ಹಾಗೂ ಸದಸ್ಯರುಗಳನ್ನು ಅಯ್ಕೆ ಮಾಡಿ ಎಂದು ಸಲಹೆ ನೀಡಿದರು.
ಕಳೆದ 10 ವರ್ಷಗಳಿಂದ ಸಕ್ರಿಯವಾಗಿ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆನೆಕಲ್ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಕಾರಣಂತರಗಳಿಂದ ಟಿಕೆಟ್ ತಪ್ಪಿದ್ದರೂ ಪಕ್ಷಕ್ಕೆ ನಿಷ್ಠೆಯಾಗಿ ದುಡಿದಿದ್ದೇನೆ. ಹಾಗಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಸಿಗುವ ವಿಶ್ವಾಸವಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರ ಬಳಿ ಈಗಾಗಲೇ ಟಿಕೆಟ್ ಕೊಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಛಲವಾದಿ ಸಂಘದ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು, ಜಿಲ್ಲಾ ಅಧ್ಯಕ್ಷ ರಮೇಶ್, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಖಜಾಂಚಿ ಕೆ.ಜೆ.ಜವರಪ್ಪ, ತಾಲೂಕು ಎಸ್ಸಿ ಮೋರ್ಚಾ ಅಧ್ಯಕ್ಷ ಹೊರೆಯಾಲ ಕೃಷ್ಣ, ಮಹೇಶ್ ಕಿರಣ್, ಪಿ.ಎಂ.ಮಹೇಶ್, ಹೂವಯ್ಯ, ಮುತ್ತಣ್ಣ, ಕಾಳಿಂಗಸ್ವಾಮಿ, ದೇವರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.