ಕನಕಪುರ: ನಗರಸಭೆಗೆ ಸರ್ಕಾರದಿಂದ ನೂತನ ನಾಮಿನಿ ಸದಸ್ಯರಾಗಿ ನೇಮಕಗೊಂಡಿರುವ ಐವರು ಸದಸ್ಯರಿಗೆ ಸೋಮವಾರ ನಗರ ಸಭೆಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.
ನಗರಸಭೆ ವ್ಯಾಪ್ತಿಯ ಕೋಟೆ ನಿವಾಸಿ ಕೆ.ಎಚ್. ಮುಕುಂದ, ರಾಘವೇಂದ್ರ.ಕೆ.ವಿ, ಐಬಿ ಬಡಾವಣೆಯ ನಿವಾಸಿ ಜಿ.ಪಿ. ವೀರೇಶ್, ನೀಲಶೆಟ್ಟರ ಬೀದಿ ನಿವಾಸಿ ಮಧುಸೂದನ್.ಕೆ.ಆರ್, ಮಹಾರಾಜರ ಕಟ್ಟೆ ರಸ್ತೆಯ ಅಮರ್ ನಾಮಿನಿ ಸದಸ್ಯರಾಗಿ ನೇಮಕಗೊಂಡು ಅಭಿನಂದನೆ ಸ್ವೀಕರಿಸಿದರು.
ನಗರಸಭೆಯಲ್ಲಿ ನೂತನ ಸದಸ್ಯರನ್ನು ಅಭಿನಂದಿಸಿದ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ ಕ್ಷೇತ್ರದ ಶಾಸಕರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಸಂಸದ ಡಿ.ಕೆ. ಸುರೇಶ್ ಸರ್ಕಾರದಿಂದ ನಾಮಿನಿ ಸದಸ್ಯರನ್ನು ನೇಮಕ ಮಾಡಿಸಿದ್ದಾರೆ.
ನಾಮಿನಿ ಸದಸ್ಯರನ್ನು ಇಂದು ನಗರ ಸಭೆಗೆ ಸ್ವಾಗತಿಸಿ ಅಭಿನಂದಿಸಿದ್ದೇವೆ, ಚುನಾಯಿತ ಪ್ರತಿನಿಧಿಗಳು ನಾಮಿನಿ ಸದಸ್ಯರ ಜೊತೆಗೂಡಿ ಎಲ್ಲರೂ ಒಟ್ಟಾಗಿ ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ನಗರಸಭಾ ಆಯುಕ್ತ ಎಂ.ಎಸ್. ಮಹದೇವ್ ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿ ಸರ್ಕಾರವು ಐವರು ಮಂದಿ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ಜನಸೇವೆಗೆ ಅವಕಾಶ ಮಾಡಿಕೊಟ್ಟಿದೆ. ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳ ಜೊತೆಗೂಡಿ ಸಾರ್ವಜನಿಕ ಕೆಲಸಗಳನ್ನು ಮಾಡಲಿ, ನಗರದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಆಶಿಸಿದರು.
ನಗರಸಭೆ ಉಪಾಧ್ಯಕ್ಷ ಸೈಯ್ಯದ್ ಸಾದಿಕ್, ನಗರಸಭಾ ಸದಸ್ಯರಾದ ಮೋಹನ್, ಕಾಂತರಾಜು, ವಿಜಯಕುಮಾರ್, ರಾಜು, ಕೋಟೆ ಕಿರಣ್, ಹೇಮಾ ರಾಜು, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಎನ್. ದಿಲೀಪ್, ತಾಲ್ಲೂಕು ವರ್ತಕರ ಸಂಘ, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರಸಭಾ ಸಿಬ್ಬಂದಿಗಳು ಶುಭ ನೂತನ ನಾಮಿನಿ ಸದಸ್ಯರನ್ನು ಅಭಿನಂದಿಸಿದರು.