ಬೆಂಗಳೂರು: ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಪಂಚಖಾತ್ರಿ ಗ್ಯಾರಂಟಿಗಳ ಜೊತೆಗೆ ಕಾಸಿಗಾಗಿ ಪೋಸ್ಟಿಂಗ್ ಎಂಬ ಆರನೇ ಗ್ಯಾರಂಟಿಯನ್ನು ಖಾತ್ರಿಗೊಳಿಸಿದೆ ಎಂದು ಆಪಾದಿಸಿದ್ದಾರೆ.
ಸರ್ಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರ್ಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎಂದು ಹೇಳಿದ್ದಾರೆ.ಸ್ವತಃ ಮುಖ್ಯಮಂತ್ರಿಗಳ ಕಚೇರಿಯಲ್ಲಿ ವರ್ಗಾವರ್ಗಿ ದಂಧೆಗೆ ಹುಂಡಿ ಇದೆ ಎನ್ನುವುದು ದಾಖಲೆ ಸಮೇತ ಬಯಲಾಗಿದೆ. ಒಂದೇ ಹುದ್ದೆಗೆ ಸ್ವತಃ ಮುಖ್ಯಮಂತ್ರಿಯವರೇ ನಾಲ್ವರಿಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದ ಅವರು ರಾಜ್ಯದ ಮುಖ್ಯಮಂತ್ರಿ ಕಚೇರಿಯೋ ಅಥವಾ ಭ್ರಷ್ಟಾಚಾರದ ಕರ್ನಾಟಕವೋ ಎಂದು ವಾಗ್ದಾಳಿ ನಡೆಸಿದ್ದಾರೆ.ಒಂದು ಹುದ್ದೆಗೆ ನಾಲ್ವರಿಗೆ ಶಿಫಾರಸು ಮಾಡಿರುವ ಪತ್ರದ ಹಿಂದಿರುವ ಆ ಅತೀಂದ್ರ ಶಕ್ತಿ ಯಾವುದು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೂರೊಪ್ಪತ್ತು ಶಿಫಾರಸು ಪತ್ರಗಳನ್ನು ಟೈಪಿಸಿ ಮುಖ್ಯಮಂತ್ರಿ ಸಾಹೇಬರ ಸಹಿ ಮಾಡಿಸುವುದರಲ್ಲಿಯೇ ಅಕಾರಿಗಳು ತಲ್ಲೀನರಾಗಿದ್ದಾರೆನ್ನುವುದು ಖಾತ್ರಿ. ವರ್ಗಾವರ್ಗಿಯ ಪೇಮೆಂಟ್ ಕೋಟಾ ನಿಯಂತ್ರಣ ಮಾಡುತ್ತಿರುವ ಆ ರಿಮೋಟ್ ಕಂಟ್ರೋಲ್ ಬಗ್ಗೆ ಜನಕ್ಕೆ ಅರ್ಥವಾಗಬೇಕಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೊದಲ ದಿನದಿಂದಲೇ ಕಾಸಿಗಾಗಿ ಪೋಸ್ಟಿಂಗ್ ದಂಧೆ ಶುರುವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವುದರ ಬದಲು ಬಂದಿದ್ದನ್ನು ಬಿಡದೆ ಬಾಚಿಕೋ ಎಂಬುದು ಈ ಸರ್ಕಾರದ ಧ್ಯೇಯ ನೀತಿಯಾಗಿದೆ. ಜನರ ಹಣೆಗೆ ಗ್ಯಾರಂಟಿ ತುಪ್ಪ ಸವರಿ ಬಿಟ್ಟಿ ಭಾಗ್ಯದ ಬೆಲ್ಲದ ಆಮಿಷವೊಡ್ಡಿ ಲೂಟಿ ಪರ್ವಕ್ಕೆ ಹುಂಡಿ ಇಡಲಾಗಿದೆ ಎಂದು ಅವರು ಆರೋಪಗಳ ಸುರಿಮಳೆಗೈದಿದ್ದಾರೆ.