ಚಿಕ್ಕಮಗಳೂರು: ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಕೇಸಲ್ಲಿ ಅವರದ್ದೇ ಶಾಸಕರಿಗೆ ಕಾಂಗ್ರೆಸ್ ಬೆಂಬಲ ಕೊಡ್ಲಿಲ್ಲ. ಕಾಂಗ್ರೆಸ್ ಶಾಸಕರ ಮನೆ ಸುಟ್ಟರೂ, ಯಾರೂ ಹೋಗಲಿಲ್ಲ. ಮೊದಲು ನಾವೇ ಹೋಗಿದ್ದು ಅಲ್ಲಿಗೆ. ಕಾಂಗ್ರೆಸ್ ಶಾಸಕರಿಗೆ ನೈತಿಕ ಬೆಂಬಲವನ್ನೂ ಕೊಡ್ಲಿಲ್ಲ. ಕೆ.ಜೆ.ಹಳ್ಳಿ, ಡಿ.ಜೆ. ಹಳ್ಳಿ, ಹುಬ್ಬಳ್ಳಿ ಕೇಸ್ ಆದ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತು, ಅಲ್ಲಿ ತಪ್ಪು ಮಾಡಿದ್ದಾರೆಂದು ಕಾಂಗ್ರೆಸಿಗೆ ಇಂದು ಅರಿವಾಗ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಮಾಧ್ಯಮವದರ ಜೊತೆಗೆ ಮಾತನಾಡಿದ ಅವರು, ಪೊಲೀಸ್ ಸ್ಟೇಷನ್, ಮನೆ, ವಾಹನ ಎಲ್ಲವನ್ನೂ ಸುಟ್ಟರು. ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಒಂದು ರೀತಿ ಸ್ಮಶಾನವಾಗಿತ್ತು. ಅದಕ್ಕೆ ಕಾಂಗ್ರೆಸ್ ಕುಮ್ಮಕ್ಕಿತ್ತು. ಸರ್ಕಾರಕ್ಕೆ ಕೆಟ್ಟ ಹೆಸರು ತರೋದ್ರ ಜೊತೆ ಒಂದು ಸಮುದಾಯದ ಓಲೈಕೆಗೆ ಮುಂದಾಗಿದ್ರು. ನ್ಯಾಯುತವಾದ ತನಿಖೆ ಮಾಡಿ, ತಪ್ಪು ಮಾಡಿದ್ದು ಯಾರೆಂದು ಗೊತ್ತಾಗುತ್ತೆ ಎಂದರು.
ಜನಕ್ಕೆ ಸಿದ್ದರಾಮಯ್ಯ ಸರ್ಕಾರ ಅಂದ್ರೆ ಯಡವಟ್ಟು ಸರ್ಕಾರ ಅನ್ನಿಸ್ತಿದೆ. ಯಾವ ಆಧಾರದಲ್ಲಿ ಎಲೆಕ್ಷನ್ ಗೆದ್ದಿದ್ರೋ ಅದಕ್ಕೆ ಉಲ್ಟಾ ಇದೆ. ಸರ್ಕಾರ ಹೊಸದಾಗಿ ಬಂದಿದ್ದು, ನಾಲ್ಕೈದು ತಿಂಗಳಾಗಿದೆ. ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸರ್ಕಾರ ಸ್ವಜನ ಪಕ್ಷಪಾತದ ಉತ್ತುಂಗಕ್ಕೆ ಏರಿದೆ.
ನಾಲ್ಕೇ ತಿಂಗಳಿಗೆ ಅಧಿಕಾರಿಗಳು ಬೇಸತ್ತಿದ್ದಾರೆ, ಅವರಿಗೆ ಖುಷಿ ಇಲ್ಲ. ಇದು ಇಂದಿನ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ, ಸಿಎಂ, ಡಿಸಿಎಂ, ಶಾಸಕರು, ಮಂತ್ರಿಗಳು ಏನು ಮಾಡ್ತಿದ್ದಾರೆ, ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.