ಯಳಂದೂರು: ರೈತರು ದುಡಿಯುತ್ತಿರುವ ಜಮೀನುಗಳಿಗೆ ತೆರಳಿ ಕೃಷಿ ಕೂಲಿ ಕಾರ್ಮಿಕರೊಂದಿಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದಪ್ಪಸ್ವಾಮಿ ಸೋಮವಾರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಬಡವರ ಪರವಾಗಿದೆ. ಬಡವರಿಗೆ, ಕಾರ್ಮಿಕರಿಗೆ ಅನ್ನ ನೀಡುವ ಅನೇಕ ಯೋಜನೆಗಳನ್ನು ಪಕ್ಷ ರೂಪಿಸಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಅನೇಕ ಕುಟುಂಬಗಳು ಇಂತಹ ಬರಗಾಲದಲ್ಲೂ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಮಹಿಳೆಯರು ತಮ್ಮ ಕುಟುಂಬವನ್ನು ನಿಭಾಯಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನೆಮ್ಮದಿಯಿಂದ ಜನರು ಬದುಕುತ್ತಿದ್ದಾರೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ೧ ಲಕ್ಷ ರೂ. ನೀಡುವ ಯೋಜನೆಯನ್ನು ಘೋಷಿಸಿದೆ. ನುಡಿದಂತೆ ನಡೆಯುವ ಸರ್ಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಾಗಿದ್ದು ಈ ಬಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಚಾಮರಾಜನಗರ ಮೀಸಲು ಕ್ಷೇತ್ರದ ಅಭ್ಯರ್ಥಿ ಸುನೀಲ್‌ಬೋಸ್‌ರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಗ್ರಾಪಂ ಸದಸ್ಯ ಆರ್.ಪುಟ್ಟಬಸವಯ್ಯ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಕೇವಲ ಕೋಮುವಾದ, ಕೋಮು ದ್ವೇಷವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ. ಬಡವರ ಪರವಾದ ಒಂದು ಯೋಜನೆಯನ್ನೂ ಮಾಡುತ್ತಿಲ್ಲ. ಕಾರ್ಪೋರೇಟ್ ಪರವಾದ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಚುನಾವಣಾ ಬಾಂಡ್‌ಗಳ ಮೂಲಕ ದೊಡ್ಡ ಹಗರಣಗಳನ್ನು ಮಾಡಿದೆ. ಈ ಬಾರಿ ಜನರು ಬದಲಾವಣೆಯನ್ನು ಬಯಸಿದ್ದಾರೆ. ನಮ್ಮ ಕ್ಷೇತ್ರದಲ್ಲೂ ಕಾಂಗ್ರೆಸ್ ಪರ ಅಲೆ ಇದ್ದು ಈ ಬಾರಿ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಕುಮಾರ್ ಮುಖಂಡರಾದ ನಂಜುಂಡಶೆಟ್ಟಿ, ಮಹದೇವಸ್ವಾಮಿ, ರಾಜು ಸೇರಿದಂತೆ ಅನೇಕರು ಇದ್ದರು.