ನವದೆಹಲಿ: ಇಂದಿನಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ಮೀಸಲಾತಿ ಕಾಂಗ್ರೆಸ್‌ನ ಕೂಸು, ಬಿಜೆಪಿಯವರಿಗೆ ಮಹಿಳೆಯವರ ಮೇಲೆ ಗೌರವ ಇದ್ದರೆ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕಾರ ಪಡೆದುಕೊಳ್ಳಲಿ ಎಂದು ಆಗ್ರಹಿಸಿದೆ.
ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯಬೇಕು. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಲವಾರು ಸಂದರ್ಭಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿದ್ದರೂ ಲೋಕಸಭೆಯಲ್ಲಿ ಇಲ್ಲಿಯವರೆಗೆ ಅಂಗೀಕಾರವಾಗಿಲ್ಲ ಎಂದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ದೇಶದ ಪರವಾಗಿ ಮನವಿ ಮಾಡುತ್ತೇವೆ. ಸರ್ಕಾರ ಇದನ್ನು ಪರಿಗಣಿಸಿ ಮಸೂದೆಯನ್ನು ಮಂಡಿಸಲಿದೆ ಎಂದು ಪಕ್ಷ ಭಾವಿಸುತ್ತದೆ ಎಂದರು.
ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರು, ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಯುಪಿಎ ಕಲ್ಪನೆಯ ಕೂಸಾಗಿದೆ. ನಮ್ಮ ಸರ್ಕಾರವಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ೫೦ ಪ್ರತಿಶತ ಮೀಸಲಾತಿ ನೀಡಿದ್ದೇವೆ. ನಾವು ಸಂಪೂರ್ಣವಾಗಿ ಮಹಿಳಾ ಮೀಸಲಾತಿ ಪರ ಇದ್ದೇವೆ. ಕೇಂದ್ರ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ, ಇದೇ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು ಎಂದು ಹೇಳಿದರು.