ಮಂಡ್ಯ: ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಾಂಗ್ರೆಸ್-ಬಿಜೆಪಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿವೆ.
ಬಿಜೆಪಿಯ ಆಹೋರಾತ್ರಿ ಧರಣಿಗೆ ಕೌಂಟರ್ ಎಂಬಂತೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಕಾಂಗ್ರೆಸ್ ನಿಂದ ಕೌಂಟರ್ ಧರಣಿ ಸತ್ಯಾಗ್ರಹ ನಡೆಸಲಾಗಿದೆ.
ನೆನ್ನೆಯಿಂದ ಬಿಜೆಪಿ.ಆಹೋರಾತ್ರಿ ಧರಣಿ ಆರಂಭಿಸಿದ್ದು, ಇಂದು ಕಾಂಗ್ರೆಸ್ ಪಕ್ಷದಿಂದ ಆಹೋರಾತ್ರಿ ಧರಣಿ ನಡೆಸಲಾಗುತ್ತಿದೆ,
ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಚಲುವರಾಯಸ್ವಾಮಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಇದು ಚಲುವರಾಯಸ್ವಾಮಿ ಅವರ ಬೆಳವಣಿಗೆ ತಪ್ಪಿಸಲು ಮಾಡುತ್ತಿರುವ ಹುನ್ನಾರ. ಮಂಡ್ಯ ಜಿಲ್ಲೆಯಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ. ಕೃಷಿ ಸಚಿವರ ವಿರುದ್ಧ ನಕಲಿ ದೂರು ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್-ಬಿಜೆಪಿ ತಾಳ-ಮೇಳ ಇದ್ದ ಹಾಗೆ
ಈ ವೇಳೆ ಮಾತನಾಡಿದ ಶಾಸಕ ಗಣಿಗ ರವಿಕುಮಾರ್, ಬಿಜೆಪಿಯವರೇ ನಕಲಿ ಲೆಟರ್ ಸೃಷ್ಟಿಕರ್ತರು. ಜೆಡಿಎಸ್-ಬಿಜೆಪಿ ತಾಳ-ಮೇಳ ಇದ್ದ ಹಾಗೆ ಎಂದು ಬಿಜೆಪಿ-ಜೆಡಿಎಸ್ ವಿರುದ್ದ ಕಿಡಿಕಾರಿದ್ದಾರೆ.

ಬಿಜೆಪಿಯವರು ರಾಜ್ಯಪಾಲರ ಕಚೇರಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಮೂಕ ಅರ್ಜಿ ಬರೆದುಕೊಂಡು ಡ್ರಾಮಾ ಮಾಡ್ತಿದ್ದಾರೆ. ಗುತ್ತಿಗೆದಾರರೇ ಯಾವುದೇ ಕಮಿಷನ್ ಕೇಳಿಲ್ಲ ಎಂದು ಹೇಳಿದ್ದಾರೆ. ಸರಸ್ವತಿ ಪುರಂ ಅಂಚೆ ಕಚೇರಿಯಿಂದ ಪೋಸ್ಟ್ ಹೋಗಿದೆ. ಸಿಸಿಟಿವಿ ವಿಡಿಯೋ ಡಿಲಿಟ್ ಆಗಿದೆ ಯಾರು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಚಲುವರಾಯಸ್ವಾಮಿ ಅವರನ್ನ ತೆಗೆಸಲು ಕುತಂತ್ರ ನಡೆಸಲಾಗುತ್ತಿದ್ದು, ಕಿಡಿಗೇಡಿಗಳ ಬಂಧನವಾಗುವವರೆಗೆ ನಾವು ಪ್ರತಿಭಟನೆ ಮಾಡುತ್ತೇವೆ. ಬಿಜೆಪಿಯವರು ನಿರುದ್ಯೋಗಿಗಳು ಅವರಿಗೆ ಅಧಿಕಾರ ಕಳೆದುಕೊಂಡು ಬುದ್ದಿ ಭ್ರಮಣೆಯಾಗಿದೆ. ಟೈಮ್ ಪಾಸ್ ಗೆ ಬಿಜೆಪಿಯವರು ಪ್ರತಿಭಟನೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ನಮಗೆ ನ್ಯಾಯ ಬೇಕು ಹೋರಾಟ ಮಾಡ್ತಿದ್ದೇವೆ. ಬಿಜೆಪಿಗರು ಬ್ರಿಟಿಷರು ಇದ್ದ ಹಾಗೆ. ಇದು ಜೆಡಿಎಸ್-ಬಿಜೆಪಿ ಜಂಟಿ ಪ್ರತಿಭಟನೆ. ಜೆಡಿಎಸ್ ನವರು ಎಲ್ಲೊ ಕೂತು ಕೀ ಕೊಡ್ತಿದ್ದಾರೆ. ಜೆಡಿಎಸ್ ಲೆಟರ್ ಬರೆದು ಪೋಸ್ಟ್ ಮಾಡ್ತಾರೆ. ಬಿಜೆಪಿಯವರು ಪ್ರತಿಭಟನೆ ಮಾಡ್ತಾರೆ ಎಂದು ಆರೋಪಿಸಿದ ಅವರು, ಸಿಐಡಿ ತನಿಖೆ ಮಾಡ್ತಿದೆ. ಸತ್ಯ ಹೊರಗೆ ಬರಬೇಕು ಅಷ್ಟೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.
ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್
ಮಂಡ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ಪ್ರತಿಭಟನೆ ಹಿನ್ನಲೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, 3 ಮೀಸಲು ಪಡೆ ಹಾಗೂ 80 ಮಂದಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.