ಹುಬ್ಬಳ್ಳಿ: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಳಜಗಳ ಆರಂಭವಾಗಿದೆ. ದೀಪಾವಳಿ ಒಳಗಡೆ ಕಾಂಗ್ರೆಸ್ ಸರ್ಕಾರ ಢಮಾರ್ ಆಗೋದು ಪಕ್ಕಾ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತಾಡಿದ ಅವರು, ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದೆ. ಕಾಂಗ್ರೆಸ್ ಈಗ ಟೈಮ್ ಬಾಂಬ್ ಫಿಕ್ಸ್ ಮಾಡಿದೆ. ಸಿದ್ದರಾಮಯ್ಯ ಜೊತೆಗೆ ಬಂಡೆಯಂತೆ ಜೊತೆಗಿರುತ್ತೇನೆ ಎನ್ನುತ್ತಿರುವವರೇ ಡೇಂಜರ್. ಡಿಕೆ ಶಿವಕುಮಾರ್ ಒಂದು ಬಾಂಬ್, ಪ್ರಿಯಾಂಕಾ ಖರ್ಗೆ, ಎಂಬಿ ಪಾಟೀಲ್ ಯಾವ ಯಾವ ಬಾಂಬ್ ಇಟ್ಟಿದ್ದಾರೆ ಅವರಿಗೆ ಕೇಳಬೇಕು ಎಂದರು.
ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಮತ್ತು ಮುಖಂಡರು ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ. ರಾಜೀನಾಮೆಗೆ ಸಮಯವನ್ನೂ ನಿಗದಿಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವು ಸಚಿವರು ತಾವು ಸಹ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯರ ವಿರುದ್ಧ ಇರುವ ಮುಡಾ ಹಗರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಅಲ್ಲಿ ಮಾತ್ರ ಏನೂ ಮುಚ್ಚಿಡಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಎಲ್ಲವೂ ಸಾಬೀತಾಗುತ್ತದೆ. ಅದಕ್ಕೂ ಮುನ್ನ ಸಿಎಂ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.