ಹುಬ್ಬಳ್ಳಿ : ಈಗಾಗಲೇ ಅನುದಾನದ ವಿಚಾರವಾಗಿ ಸರ್ಕಾರದ ವಿರುದ್ಧ ಸ್ವತಹ ಕಾಂಗ್ರೆಸ್ ಶಾಸಕರೇ ತಿರುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕಾಂಗ್ರೆಸ್ ಶಾಸಕರಿಂದಲೇ ಪತನವಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಸ್ಪೋಟಕ ಹೇಳಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವಾಗ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಗೊತ್ತಿಲ್ಲ. ಅನುದಾನದ ವಿಚಾರವಾಗಿ ನಿನ್ನೆ ಶಾಸಕ ಗವಿಯಪ್ಪ ಮಾತನಾಡಿದ್ದಾರೆ. ಈ ಹಿಂದೆ ಶಾಸಕ ರಾಜುಕಾಗೆ ಸಹ ಇದೇ ವಿಚಾರವಾಗಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಅವರದ್ದೇ ಶಾಸಕರು ಕುದಿಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಹಿಂದೆ ಶಾಸಕ ರಾಜುಕಾಗೆ ರಾಜೀನಾಮೆ ನೀಡೋದಾಗಿ ಕೂಡ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಶಾಸಕರಿಂದಲೇ ಸಿದ್ದರಾಮಯ್ಯ ಸರ್ಕಾರ ಬಿದ್ದು ಹೋಗುತ್ತದೆ. ಅವರ ತಪ್ಪಿನಿಂದಲೇ ಯಾವಾಗ ಬೇಕಾದರೂ ಸರ್ಕಾರ ಪತನವಾಗಬಹುದು ಎಂದರು.
ಇನ್ನು 100 ಕೋಟಿ ಆಫರ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹಿಟ್ ಅಂಡ್ ರನ್ ರೀತಿ ಹೇಳಿಕೆ ನೀಡುತ್ತಿದ್ದಾರೆ. 50 ಕೋಟಿ ಹಾಗೂ ನೂರು ಕೋಟಿ ಆಫರ್ ಅಂದರೆ ಸಾಮಾನ್ಯ ಅಲ್ಲ. ಈ ಕುರಿತು ಆಡಿಯೋ ವಿಡಿಯೋ ಇದೆ ಅಂತಾರೆ ಆದರೆ ಯಾಕೆ ಬಿಡುಗಡೆ ಮಾಡಿಲ್ಲ ಕಾಂಗ್ರೆಸ್ನವರು ಬೋಗಸ್ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.ಸಿಎಂ ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು.