ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು,ಕೇಂದ್ರ ಸರಕಾರದ ಮುಂದೆ ಚೊಂಬು ಹಿಡಿದು ಗೋಗರೆಯುವ ಪರಿಸ್ಥಿತಿ ಬಂದಿದೆ ಎಂದು ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು
ಸಾಲಿಗ್ರಾಮ ಪಟ್ಟಣದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು’ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣ ಸಾಲ ಮಾಡಿದ್ದು, ಖಜಾನೆ ಲೂಟಿ ಮಾಡಿದೆ ಎಂದರು
ಪ್ರತಿಯೊಬ್ಬರ ಮೇಲೆ ೩೬ ಸಾವಿರ ರೂ.ಸಾಲ ಹೊರಿಸಿದೆ.ಹೀಗಾಗಿ ಕೇಂದ್ರ ಸರ್ಕಾರದ ಮುಂದೆ ಚೊಂಬು ಹಿಡಿದು ಬೇಡುವ ದುಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ತಾನು ಮುಖ್ಯಮಂತ್ರಿಯಾಗಿ ಸಾರಾಯಿ,ಲಾಟರಿ ನಿಷೇಧ ಮಾಡಿ ಮಹಿಳೆಯರಿಗೆ ನೆಮ್ಮದಿ ಕಲ್ಪಿಸಿದ್ದೇನೆ.ಹತ್ತುಹಲವು ಜನಪರ ಯೋಜನೆಗಳನ್ನು ಜಾರಿಮಾಡಿದ್ದೆ.ಈಗ ಬಿಜೆಪಿಯೊಂದಿಗೆ ಕೈಜೋಡಿಸಿ ಮಂಡ್ಯಕ್ಷೇತ್ರದ ಎನ್ ಡಿಎ ಅಭ್ಯರ್ಥಿಯಾಗಿದ್ದೇನೆ ಎಂದು ಹೇಳಿದರು
ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ತಂದೆ ದೇವೇಗೌಡರು,ನನ್ನ ಮೇಲೆ ವಿಶೇಷ ಗೌರವ ಹೊಂದಿದ್ದು, ನನ್ನನ್ನು ಗೆಲ್ಲಿಸಿದರೆ ಮಂಡ್ಯ ಕ್ಷೇತ್ರಕ್ಕೆ ವಿಶೇಷ ಅನುದಾನ ತಂದು ಅಭಿವೃದ್ದಿ ಕೆಲಸ ಮಾಡುವೆ.ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಸಾಲಿಗ್ರಾಮ ಪಟ್ಟಣ ತಾಲೂಕು ಕೇಂದ್ರವಾಗಲು ಕಾರಣಕರ್ತರಾದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಜಿ.ಪಂ.ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ಅವರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್,ಎಂಎಲ್ಸಿ ಹೆಚ್.ವಿಶ್ವನಾಥ್ ಮಾತನಾಡಿದರು. ಅರಕಲಗೂಡು ಶಾಸಕ ಎ.ಮಂಜು, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ,ವಕ್ತಾರ ಕೆ.ಎಲ್.ರಮೇಶ್,ಶ್ರೀರಂಗಪಟ್ಟಣ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಸಂಜಯ್,ಮುಖಂಡರಾದ ಹೊಸಳ್ಳಿ ವೆಂಕಟೇಶ್, ಎಸ್.ಕೆ. ಮಧುಚಂದ್ರ,ಮಿಲ್ ಸೋಮಣ್ಣ,,ಅಂಕನಹಳ್ಳಿ ತಿಮ್ಮಪ್ಪ,ಸಾ.ರಾ.ತಿಲಕ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.