ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ನೂತನ ಕಾಂಗ್ರೆಸ್ ಸರಕಾರವು ೫ ವರ್ಷಗಳ ದಿಕ್ಸೂಚಿ ಆಗಬೇಕಿತ್ತು. ಆದರೆ, ಅದು ದಿಕ್ಕು ತಪ್ಪಿದ ಸರಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪಿಸಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲ ಬಂದಾಗ ರೈತರಿಗೆ ಕನಿಷ್ಠ ಸಹಾಯ ಮಾಡಿಲ್ಲ. ೨ ಬಾರಿ ಬಿತ್ತನೆ ಮಾಡಿ ಬೀಜ ಗೊಬ್ಬರ ಹಾಕಿ ರೈತರು ಕಂಗಾಲಾಗಿದ್ದಾರೆ. ಸಾಲವೂ ಸಕಾಲದಲ್ಲಿ ಸಿಗುತ್ತಿಲ್ಲ ಎಂದರು. ನಾಲ್ಕು ದಿಕ್ಕಿನಲ್ಲಿ ಗಮನಿಸಿದರೂ ಸರಕಾರ ವಿಫಲವಾಗಿದೆ. ಗೊಂದಲಗಳಲ್ಲಿ ಅದು ಸಿಲುಕಿ ಹಾಕಿಕೊಂಡಿದೆ. ಇದರ ಒಟ್ಟು ಪರಿಣಾಮವೆಂಬಂತೆ ಜನರಿಗೆ ಕೊಟ್ಟ ಮಾತಿಗೆ ಅದು ತಪ್ಪಿ ನಡೆದಿದೆ ಎಂದರು.
ಕೋವಿಡ್ ವೇಳೆ ೧೪ ಸಾವಿರ ಕೋಟಿ ಕೊರತೆ ಇದ್ದುದನ್ನು ನಾವು ಸರಿದೂಗಿಸಿ ಮಿಗತೆ ಬಜೆಟ್ ಮಂಡಿಸಿದ್ದೇವೆ. ಇವರು ಕೋವಿಡ್ ಇಲ್ಲದಿದ್ದರೂ ಮತ್ತೆ ಕೋವಿಡ್ ಸ್ಥಿತಿಗೆ ಹಣಕಾಸಿನ ಸ್ಥಿತಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು. ಸರಕಾರಿ ನೌಕರರ ವೇತನ ವಿಳಂಬವಾಗುತ್ತಿದೆ. ಇವರು ಅಧಿಕಾರಕ್ಕೆ ಬಂದ ಬಳಿಕ ಒಂದು ಕಿಮೀ ರಸ್ತೆಯನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ರೈತರ ಸಾಲ ವಸೂಲಿ ನಿಲ್ಲಿಸಿ. ಹೊಸ ಸಾಲ, ಬೀಜ- ಗೊಬ್ಬರಕ್ಕೆ ಹೊಸ ಅನುದಾನ ನೀಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು. ಕೃಷಿ ಇಲಾಖೆಯಲ್ಲಿ ಇನ್ನೂ ಟ್ರಾನ್ಸ್‌ಫರ್ ಸುಗ್ಗಿ ನಡೆದಿದೆ. ಪಿಡಬ್ಲುಡಿ ಸೇರಿ ಎಲ್ಲ ಇಲಾಖೆಯಲ್ಲಿ ವರ್ಗಾವಣೆಯದೇ ಸುಗ್ಗಿ ನಡೆದಿದೆ. ರೈತ ವಿದ್ಯಾನಿಧಿ, ಭೂಸಿರಿ, ಜೀವನ ಜ್ಯೋತಿ ರೈತರ ವಿಮೆ ಸೇರಿ ನಮ್ಮ ಕಾಲದ ರೈತರ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು. ರೈತರ ಆದಾಯ ಹೆಚ್ಚಳ ಕಾರ್ಯಕ್ರಮಗಳು ನಿಂತಿವೆ ಎಂದು ತಿಳಿಸಿದರು. ಈ ಸರಕಾರ ರೈತವಿರೋಧಿಯಾಗಿದೆ ಎಂದು ಟೀಕಿಸಿದರು.