ಮೈಸೂರು: ನನ್ನ ವಿರುದ್ಧ ಡಿನೋಟಿ ಫಿಕೇಶನ್ ಆರೋಪ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ಮೂವರು ಸಚಿವರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅದೊಂದು ಸ್ಕ್ರಿಪ್ಟೆಡ್ಡ್ ಮಾದ್ಯಮಗೋಷ್ಠಿ ಎಂದು ಲೇವಡಿ ಮಾಡಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿಂದು ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; ಯಾರೂ ಬರೆದುಕೊಟ್ಟ ಸ್ಕ್ರಿಪ್ಟ್ ಅನ್ನು ಮೂವರು ಸಚಿವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅಲ್ಲಿ ಅಂದು ಮುಖ್ಯಮಂತ್ರಿ ಆಗಿದ್ದ ನಾನೇನು ಬರೆದಿದ್ದೇನೆ, ನಾನೇನು ಆದೇಶ ಮಾಡಿದ್ದೇನೆ ಎಂಬುದು ಅವರಿಗೆ ಗೊತ್ತಿಲ್ಲವೇ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರು, ತಮ್ಮ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮಾಡಲು ಸಚಿವರಿಗೆ ಬರೆದುಕೊಡಲಾಗಿದ್ದ ಟೂಲ್ ಕಿಟ್ ಪ್ರತಿಯನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. ನಾನು ಕೇಂದ್ರ ಸಚಿವನಾಗಿದ್ದು ಇವರಿಗೆ ತಡೆಯಲು ಆಗುತ್ತಿಲ್ಲ. ಹೇಗಾದರೂ ನನ್ನನ್ನು ಕಟ್ಟಿ ಹಾಕಲು ಇವರು ಹಣಿಸುತ್ತಲೇ ಇದ್ದಾರೆ. ನನ್ನ ವಿರುದ್ಧ ಒಂದು ವ್ಯವಸ್ಥಿತ ಟೂಲ್ ಕಿಟ್ ರೆಡಿ ಮಾಡಿದ್ದಾರೆ. ಅದನ್ನೇ ಸಚಿವರುಗಳು ಬಾಯಿಪಾಠ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ನಾನು ಕೇಂದ್ರ ಮಂತ್ರಿಯಾಗಿದ್ದೇ ಇವರಿಗೆ ಸಂಕಟ ಶುರುವಾಗಿದೆ. ನನ್ನ ವಿರುದ್ಧ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಸಾಲು ಸಾಲಾಗಿ ಟೀಕೆ ಮಾಡುತ್ತಿದ್ದಾರೆ. ಇಡೀ ಸರ್ಕಾರದ ಟಾರ್ಗೆಟ್ ನಾನೇ ಆಗಿದ್ದೇನೆ ಎಂದು ಅವರು ಕಿಡಿಕಾರಿದರು.
ನಾನು ಬುದ್ಧಿವಂತ ಎನ್ನುತ್ತೀರಿ. ವಿದೇಶದಲ್ಲಿ ಓದಿಕೊಂಡು ಬಂದಿದ್ದೇನೆ ಎನ್ನುತ್ತೀರಿ. ಮಧ ಕೃಷ್ಣಭೈರೇಗೌಡ ವಿದೇಶದಲ್ಲಿ ಓದಿ, ಮೇಧಾವಿ ಎಂದು ಹೇಳುತ್ತೀರಿ. ಆದರೆ, ನಾನು ಹರದನಹಳ್ಳಿ ಎಂಬ ಹಳ್ಳಿಯಲ್ಲಿ ಓದಿ ಬೆಳೆದವನು. ಕೃಷ್ಣ ಭೈರೇಗೌಡರೇ.. ಮಾಧ್ಯಮಗೋಷ್ಠಿಗೂ ಮೊದಲು ಈ ಪ್ರಕರಣದ ಬಗ್ಗೆ, ದಾಖಲೆಗಳ ಬಗ್ಗೆ ಸರಿಯಾದ ಮಾಹಿತಿ ಪದ್ದುಕೊಳ್ಳಬೇಕಿತ್ತು ಅಲ್ಲವೇ? ಎಂದು ಕಂದಾಯ ಮಂತ್ರಿಗೆ ಟಾಂಗ್ ಕೊಟ್ಟರು.
ನನ್ನ ವಿರುದ್ಧದ ಪ್ರಕರಣಕ್ಕೂ ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣಕ್ಕೂ ವ್ಯತ್ಯಾಸವಿದೆ. ಅವರಂತೆ ನಾನು ಹಲ್ಕಾ ಕೆಲಸ ಮಾಡಿಲ್ಲ. ನನ್ನ ಪ್ರಕರಣದ ಬಗ್ಗೆ ತನಿಖೆ ಆಗಿದೆ. ೨೦೧೫ರಲ್ಲಿಯೇ ಇದರ ಬಗ್ಗೆ ವಿಸ್ತೃತ ತನಿಖೆ ನಡೆದು ಬಿ ರಿಪೋರ್ಟ್ ಅನ್ನು ಕೂಡ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಈ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಈಗ ರಾಜಕೀಯ ಸೇಡಿಗಾಗಿ ತೆಗೆದಿದ್ದಾರೆ. ಆಗ ತನಿಖೆ ಮಾಡದೆ ಏನು ಸುಮ್ಮನೆ ಇದ್ದಿದ್ದು ಯಾಕೆ? ಈಗ ನನ್ನನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಕುತಂತ್ರ ಫಲಿಸದು ಎಂದು ಕುಮಾರಸ್ವಾಮಿ ಅವರು ಗುಡುಗಿದರು.
ಇವರ ಹಾಗೆಯೇ ನಾನು ಯಾರಿಗೂ ಮೋಸ ಮಾಡಿಲ್ಲ. ಕಂಡವರ ಜಮೀನು ಹೊಡೆದುಕೊಂಡಿಲ್ಲ. ಇವರಂತೆ ಯಾರಿಗೂ ಟೋಪಿ ಹಾಕಿ ಜಮೀನು ಮಾಡಿಕೊಂಡಿಲ್ಲ. ನನ್ನ ಪತ್ನಿಯ ಸಂಬಂಧಿಕರು ಆ ಜಮೀನು ತೆಗೆದುಕೊಂಡಿದ್ದಾರೆ. ಆ ಜಮೀನು ಡಿನೋಟಿಫಿಕೇಶನ್ ಆಗಿರುವುದು ನಿಜ. ಎಲ್ಲವೂ ಕಾನೂನಾತ್ಮಕವಾಗಿ ಇದೆ. ತಪ್ಪು ಕೆಲಸ ಮಾಡಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿ ಕೈಕಟ್ಟಿ ನಿಲ್ಲುವ ಸಮಯ ಬಂದರೆ ರಾಜಕಾರಣದಲ್ಲಿ ಐದು ಸೆಕೆಂಡ್ ಕೂಡ ಇರುವುದಿಲ್ಲ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಮೇಯರ್ ರವಿ ಕುಮಾರ್ ಮುಂತಾದವರು ಜತೆಯಲ್ಲಿ ಇದ್ದರು.