ಬೆಂಗಳೂರು: ಇಡೀ ದೇಶದಲ್ಲಿ ಜಾತಿಗಣತಿ ಮೊದಲು ಮಾಡಿದ್ದು ನಮ್ಮ ಸರ್ಕಾರ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಜಾತಿಗಣತಿ ವರದಿ ಕೊಡುತ್ತಾರೆ. ನಾವು ಸ್ವೀಕರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಕಾಳಿದಾಸ ಹೆಲ್ತ್ ಆಂಡ್ ಎಜುಕೇಷನ್ ಟ್ರಸ್ಟ್ ಮತ್ತು ಅಹಿಲ್ಯಾ ಫೌಂಡೇಷನ್ ಹಮ್ಮಿಕೊಂಡಿದ್ದ ಪ್ರೇರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಖರವಾಗಿ ಪ್ರತಿ ಜಾತಿಗಳ ಆರ್ಥಿಕ, ಸಾಮಾಜಿಕ, ಆರ್ಥಿಕ ಸ್ಥಿತಿ ತಿಳಿಯುವ ಉದ್ದೇಶದಿಂದ ಜಾತಿಗಣತಿ ಮಾಡಿಸಿದ್ದೆ. ನಂತರ ಬಂದ ಸರ್ಕಾರಗಳು ಜಾತಿಗಣತಿ ವರದಿಯನ್ನು ಸ್ವೀಕರಿಸಲಿಲ್ಲ. ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಜಾತಿಗಣತಿ ವರದಿ ಕೊಡುತ್ತಾರೆ. ನಾವು ಸ್ವೀಕರಿಸುತ್ತೇವೆ ಎಂದರು.
ಸಮುದಾಯದಿಂದ ಮೆಡಿಕಲ್ ಕಾಲೇಜು ಮಾಡಬೇಕು ಎನ್ನುವುದು ಅವೈಜ್ಞಾನಿಕ. ಮೆಡಿಕಲ್ ಕಾಲೇಜು ನಡೆಸುವುದು ದುಬಾರಿ ಆದ್ದರಿಂದ ಬಡವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಸೀಟು ನೀಡಿ ನೆರವಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು, ಹಾಸ್ಟೆಲ್‌ಗಳನ್ನು ಮತ್ತು ಐಟಿಐ ಗಳನ್ನು ಸಮಾಜದಿಂದ ಆರಂಭಿಸಿದರೆ ಬಡವರು ಮತ್ತು ಗ್ರಾಮೀಣ ಮಕ್ಕಳಿಗೆ ನೆರವಾಗುತ್ತದೆ. ನಾನು ಬಿಎಸ್‌ಸಿ ಓದುವಾಗ ಹೋಟೆಲ್‌ನಿಂದ ಸಾರು ತಂದು ರೂಮಲ್ಲಿ ಅನ್ನ ಮಾಡಿಕೊಂಡು ಊಟ ಮಾಡಬೇಕಿತ್ತು. ಇಂಥಾ ಸ್ಥಿತಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಇರುವುದರಿಂದ ನಾನು ವಿದ್ಯಾಸಿರಿ ಕಾರ್ಯಕ್ರಮ ಜಾರಿಗೆ ತಂದೆ ಎಂದು ತಿಳಿಸಿದರು.
ಹಿಂದೆ ಗ್ರಾಮೀಣ ಭಾಗಗಳಲ್ಲಿ ವೈದ್ಯ ಹುದ್ದೆಗಳು ಹೆಚ್ಚಿದ್ದು ವೈದ್ಯರ ಸಂಖ್ಯೆ ಕಡಿಮೆ ಇತ್ತು. ಈಗ ಪರಿಸ್ಥಿತಿ ಬದಲಾಗಿ ಖಾಲಿ ಹುದ್ದೆಗಳಿಗಿಂತ ವೈದ್ಯರ ಸಂಖ್ಯೆ ದುಪ್ಪಟ್ಟಾಗಿದೆ. ಆದ್ದರಿಂದ ಖಾಲಿ ಇರುವ ಗ್ರಾಮೀಣ ವೈದ್ಯ ಹುದ್ದೆಗಳನ್ನಷ್ಟೇ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿ ನಿಯಮಾವಳಿಗೆ ತಿದ್ದುಪಡಿ ತರುವಂತಾಯಿತು ಎಂದು ಸಿಎಂ ಸ್ಪಷ್ಟಪಡಿಸಿದರು.