ಮಂಗಳೂರು (ದಕ್ಷಿಣ ಕನ್ನಡ): ರಾಜ್ಯದಲ್ಲಿ ಅಸಹಜ ಪ್ರಮಾಣದಲ್ಲಿ ಏರಿಕೆಯಾದ ಬಾಣಂತಿಯರ ಸಾವಿನ ಪ್ರಕರಣಗಳು, ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯವನ್ನು ನಿರಾಕರಿಸಿದ್ದಕ್ಕಾಗಿ ಹಿರಿಯ ನಾಗರಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ- ಇವೆಲ್ಲವನ್ನು ಗಮನಿಸಿದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೂಡಿಗೆರೆ ಹೇಳಿದರು.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಸರಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವ ರಾಜ್ಯ ಸರಕಾರ ತನ್ನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದೇಕೆ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದಲ್ಲಿ ಬಾಣಂತಿಯರ ಸಾವು ಇರಬಹುದು, ಗುತ್ತಿಗೆದಾರರ ಆತ್ಮಹತ್ಯೆಯಿಂದ ಸಚಿವರ ಮೇಲೆ ಬಂದಿರುವ ಕಪ್ಪು ಚುಕ್ಕೆ ಇರಬಹುದು, ಆಯುಷ್ಮಾನ್ ಭಾರತ್ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿ ಮಾಡದೆ ಇರುವಂಥ ಸಂದರ್ಭದಲ್ಲಿ ಒಬ್ಬ ಹಿರಿಯ ನಾಗರಿಕರ ಆತ್ಮಹತ್ಯೆ ಇರಬಹುದು, ದಿನೇ ದಿನೇ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಈ ಎಲ್ಲ ಪ್ರಕರಣಗಳಲ್ಲೂ ಎದ್ದು ಕಾಣುತ್ತಿರುವುದು ರಾಜ್ಯ ಸರಕಾರದ ವೈಫಲ್ಯ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಿನಿಂದ ಕರ್ನಾಟಕ ಸರಕಾರ ಎಲ್ಲ ವಿಚಾರಗಳಲ್ಲೂ ಎಡವುತ್ತಲೇ ಬಂದಿದೆ ಎಂದು ಆರೋಪಿಸಿದ್ದಾರೆ.