ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಮಿತ್ ಶಾ ಯಾರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸುವ ಪ್ರಯತ್ನ ಮಾಡುತ್ತಿಲ್ಲ. ಸ್ವಯಂಕೃತ ತಪ್ಪುಗಳಿಂದ ಕಾಂಗ್ರೆಸ್ ಸರ್ಕಾರ ತಾನಾಗಿಯೇ ಪತನವಾಗಲಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಮಾಡುವ ಮೂಲಕ ವಾಲ್ಮೀಕಿ ಅವರಿಗೆ ಅವಮಾನಿಸಿದೆ. ಮುಡಾ, ವಾಲ್ಮೀಕಿ ಹಗರಣದಿಂದ ರಾಜ್ಯದ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಹಾಗಾಗಿಯೇ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ವಿಷಯಾಂತರ ಮಾಡಲು ಶಾಸಕ ರವಿ ಗಣಿಗ ಇತರರಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದರು.
ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸಲು ಶಾಸಕರಿಗೆ ಬಿಜೆಪಿಯು ೧೦೦ ಕೋಟಿ ಆಫರ್ ಮಾಡಿದೆ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ, ಶಾಸಕ ರವಿ ಗಣಿಗ ಅವರು ಈ ಕುರಿತ ಸಂಪೂರ್ಣ ದಾಖಲೆ ಬಿಡುಗಡೆ ಮಾಡಬೇಕು. ಲೋಕಸಭಾ ಚುನಾವಣೆ ಮುನ್ನ ೫೦ ಕೋಟಿ ಈಗ ೧೦೦ ಕೋಟಿ ಆಫರ್ ಮಾಡಲಾಗುತ್ತಿದೆ ಎನ್ನುವವರು ಯಾಕೆ ಇಡಿ, ಐಟಿಗೆ ದೂರು ನೀಡಲಿಲ್ಲ. ವಿಷಯಾಂತರ ಮಾಡಲು ನಾಟಕವಾಡುತ್ತಿದ್ದಾರೆ. ಈ ರೀತಿಯ ನಾಟಕ ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಲಿ ಎಂದರು.