ಮಂಗಳೂರು (ದಕ್ಷಿಣ ಕನ್ನಡ): ಕರ್ನಾಟಕ ಕಾಂಗ್ರೆಸ್ ಸರಕಾರ ಮೇ 20ರಂದು 2 ವರ್ಷಗಳ ಅಧಿಕಾರ ಅವಧಿ ಪೂರೈಸಿರುವ ಹಿನ್ನಲೆಯಲ್ಲಿ ಅಭಿವೃದ್ಧಿ ಹರ್ಷ ಕಾರ್ಯಕ್ರಮವನ್ನು ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದೆಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾ ಕಛೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಅವರು , ಕಳೆದ 2 ವರ್ಷಗಳ ಅವಧಿಯಲ್ಲಿ ರಾಜ್ಯ ಸರಕಾರ ಜನರಿಗೆ ನೀಡಿರುವ ಮಾತಿನಂತೆ ಚುನಾವಣಾ ಪ್ರಣಾಳಿಕೆಯನ್ನು ಆಧರಿಸಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಜನರ ಬಾಳಿಗೆ ನೆಮ್ಮದಿಯನ್ನು ನೀಡಿದೆ. ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಯನ್ನು ಜಾರಿಗೆ ತಂದಿದ್ದೇವೆ, ಇಲ್ಲಿನ ಯೋಜನೆಯು ಇಂದು ದೇಶಕ್ಕೆ ಸ್ಫೂರ್ತಿಯಾಗಿದೆ. ಇಲ್ಲಿನ ಯೋಜನೆಯನ್ನು ಬೇರೆ ರಾಜ್ಯದವರು ಮಾದರಿಯಾಗಿ ಸ್ವೀಕರಿಸಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಅಭಿವೃದ್ದಿ ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಇದು ಸರಕಾರದ ಹೆಮ್ಮೆಯ ಸಾಧನೆಯಾಗಿದೆ. ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ಕಾರ್ಯವನ್ನು ಮಾಡ್ತಾ ಇದ್ದೇವೆ. ಬೂಟಾಟಿಕೆಗಾಗಿ ಈ ಸಂಭ್ರಮ ಮಾಡುವುದಿಲ್ಲ. ಕೊಟ್ಟ ಮಾತಿಗೆ ತಪ್ಪದೆ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಿದ್ದೇವೆ ಎಂದ್ರು.