ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಮಾಡಲಾಗದೆ ಗೊಂದಲದಲ್ಲಿ ಮುಳುಗಿದೆ ಕಾಂಗ್ರೆಸ್ ಸರ್ಕಾರ ಸುಳ್ಳುಗಳ ಕಂತೆಯನ್ನೇ ತುರುಕಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿ ಸುತ್ತ ಗಿರಕಿ ಹೊಡೆಯುವುದನ್ನು ಬಿಟ್ಟರೆ ಇನ್ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಹೊಸ ಭರವಸೆ ಮೂಡಿಸುವ ಮಾತುಗಳನ್ನು ರಾಜ್ಯಪಾಲರಿಂದ ಹೇಳಿಸಿಲ್ಲ. ಬಡವರು, ರೈತರು, ನಿರುದ್ಯೋಗಿಗಳ ಪಾಲಿಗೆ ಕಂಟಕವಾಗಿರುವ ಈ ಸರ್ಕಾರ ಉದ್ಯಮಿಗಳು ಹಾಗೂ ಸ್ವಾವಲಂಬಿಗಳಿಗೆ ಹಾಗೂ ಸ್ವಂತ ಮನೆ ಹೊಂದುವ ಸೂರು ರಹಿತರಿಗೆ, ತೆರಿಗೆ ಹಾಗೂ ಮುದ್ರಾಂಕ ಶುಲ್ಕಗಳನ್ನು ಏರಿಸುವ ಮೂಲಕ ಆರ್ಥಿಕ ವ್ಯವಹಾರಗಳಿಗೆ ಧಕ್ಕೆ ತಂದೊಡ್ಡಿರುವುದು, ಮುಂದಿನ ದಿನಗಳಲ್ಲಿ ಕರ್ನಾಟಕದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.