Tuesday, June 9, 2026
Google search engine

Homeರಾಜಕೀಯದೇವೇಗೌಡರ ವಿಷಯದಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ : ವಿಜಯೇಂದ್ರ

ದೇವೇಗೌಡರ ವಿಷಯದಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ : ವಿಜಯೇಂದ್ರ

ಬೆಂಗಳೂರು :  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಬಿಜೆಪಿಯನ್ನ ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿವೈ ವಿಜಯೇಂದ್ರ,  ಕರ್ನಾಟಕದ ಕಾಂಗ್ರೆಸ್‌ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾ  ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ‌ ಅವರು ದೇವೇಗೌಡರ ಕುರಿತು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ದೇಶದ ಅತ್ಯುನ್ನತ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿ, ಹೆಮ್ಮೆಯ ಕ್ನನಡಿಗ ಎನಿಸಿಕೊಂಡಿದ್ದ ಸನ್ಮಾನ್ಯ  ಹೆಚ್ ಡಿ ದೇವೇಗೌಡ ಅವರನ್ನು ಪ್ರಧಾನಿ ಪದವಿಯಿಂದ ಕೆಳಗಿಳಿಸಿದ ಕುಖ್ಯಾತಿ ಕಾಂಗ್ರೆಸ್‌ ಪಕ್ಷದ ಮೇಲಿರುವುದನ್ನು ಕಾಂಗ್ರೆಸ್ ಮುಂದಾಳುಗಳು ಮರೆತಂತಿದೆ. ಮಾನ್ಯ ದೇವೇಗೌಡರನ್ನು ರಾಜಕೀಯ ಜೀವನದುದ್ದಕ್ಕೂ ಕಾಡಿದ್ದು, ಅವರ ಪಕ್ಷವನ್ನು ಇಬ್ಬಾಗ ಮಾಡಲು ಯತ್ನಿಸಿದ್ದು ಕಾಂಗ್ರೆಸ್. ಇಷ್ಟಾಗಿಯೂ ಕೊಳಕು ರಾಜಕಾರಣ ಮಾಡುವುದನ್ನು ನಿಲ್ಲಿಸದ ಕಾಂಗ್ರೆಸ್ಸಿಗರು, ದೇವೇಗೌಡರ ಕುರಿತು ಕೃತಕ ಕಾಳಜಿಯ ಮಾತನಾಡುತ್ತಿರುವ ಪರಿ ಹಾಸ್ಯಾಸ್ಪದವಾಗಿದೆ ಎಂದು ಬಿವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಭಾರತೀಯ ಜನತಾ ಪಾರ್ಟಿಯು ಸನ್ಮಾನ್ಯ ದೇವೇಗೌಡ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ. ಭಾರತದ ಸಮಗ್ರತೆ ಉಳಿಯಬೇಕಾದರೆ, ಅಭಿವೃದ್ಧಿ ಹೊಂದಬೇಕಾದರೆ ಅದು ಪ್ರಧಾನಿ ನರೇಂದ್ರ ಮೋದಿಜೀ ಅವರ ಆಡಳಿತದಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯಿಂದ ದೇವೇಗೌಡ ಅವರು ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿ, NDA ಗೆ ತಮ್ಮ  ಜೆಡಿಎಸ್ ಪಕ್ಷವನ್ನು ಸೇರಿಸಿದ್ದಾರೆ. ಇದನ್ನು ಕಂಡು ಸಹಿಸಲಾಗದ ಸ್ಥಿತಿಯಲ್ಲಿರುವ ಕಾಂಗ್ರೆಸ್ಸಿಗರು ದೇವೇಗೌಡರ ಹೆಸರನ್ನು ಬಳಸಿಕೊಂಡು ರಾಜಕಾರಣ ಮಾಡಲು ಹೊರಟಿರುವುದು ನಾಚಿಗೆಗೇಡಿತನದ ಪರಮಾವಧಿಯಾಗಿದೆ.

ಅವರ ಹಿರಿತನ, ಸೇವೆ ಉಲ್ಲೇಖಿಸಿ ಸಂಸತ್ತಿನಲ್ಲಿ ಸ್ವತಃ ಪ್ರಧಾನ ಮಂತ್ರಿಗಳೇ ಭಾವುಕವಾಗಿ ಮಾತನಾಡಿ ಅವರ ಕೊಡುಗೆ, ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ರಾಷ್ಟವನ್ನು ಮುನ್ನಡೆಸುವ ನಿಟ್ಟಿನಲ್ಲಿ ಅವರ ಮಾರ್ಗದರ್ಶನ ಸದಾ ನಮಗೆ ಬೇಕೆಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅತ್ಯುತ್ತಮ ರಾಜಕೀಯ ಹಾಗೂ ವ್ಯಕ್ತಿಗತ ಗೌರವಗಳ ಬಾಂಧವ್ಯವಿರುವ ದೇವೇಗೌಡರೊಂದಿಗಿನ ಸಂಬಂಧಕ್ಕೆ ಹುಳಿ ಹಿಂಡುವ ಮಾತುಗಳು ‘ಕಾಂಗ್ರೆಸ್ಸಿಗರ ವಿಕೃತ ನಡೆ‘ ಎನ್ನುವುದನ್ನು ಕರ್ನಾಟಕದ ಜನತೆ ಅರ್ಥೈಸಿಕೊಳ್ಳದಷ್ಟು ಮುಗ್ಧರಲ್ಲ ಎನ್ನುವ ತಿಳುವಳಿಕೆ ಕಾಂಗ್ರೆಸ್ಸಿಗರಿಗಿರಲಿ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular