ಮೈಸೂರು : ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ರೆಹಾನ್ ಬೇಗ್ ಅವರು ನಗರದ ಅಝೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್ ನೇತೃತ್ವದಲ್ಲಿ ಶುಕ್ರವಾರ ಎನ್‌ಆರ್ ಪೊಲೀಸ್ ಠಾಣೆಗೆ ಸುಮಾರು ೧೦ ಸಿಸಿ ಟಿವಿ ಕ್ಯಾಮೆರಾಗಳನ್ನು ಕೊಡುಗೆಯಾಗಿ ನೀಡಿದರು.
ನಗರದ ಎನ್‌ಆರ್ ಎಸಿಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಸಿಪಿ ಅಶ್ವಥ್ ನಾರಾಯಣ ಅವರಿಗೆ ಕ್ಯಾಮೆರಾಟಗಳನ್ನು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ರೆಹಾನ್ ಬೇಗ್ ಅವರು ಮಾತನಾಡಿ, ಇತ್ತೀಚೆಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮುಂಬರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರಗಳು ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಣೇಶ ಮಂಟಪದ ಎದುರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುತ್ತಾರೆ. ಈ ವಿಚಾರವನ್ನು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದಾಗ ಅವರು ಸಕಾರಾತ್ಮವಾಗಿ ಸ್ಪಂದಿಸಿದರು.

ಈ ಕಾರಣಕ್ಕಾಗಿ ಎನ್‌ಆರ್ ಕ್ಷೇತ್ರದಲ್ಲೂ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು, ಎಲ್ಲರೂ ಸೌಹಾರ್ಧತೆಯಿಂದ ಹಬ್ಬದ ಸಂಭ್ರಮವನ್ನು ಸವಿಯಬೇಕು. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಇಲ್ಲಿ ಸೌಹಾರ್ಧತೆ ಕೆಡಿಸುವ ಯಾವುದೇ ಕೆಲಸಕ್ಕೆ ಆಸ್ಪದ ನೀಡಬಾರದು ಎಂಬ ಸದುದ್ದೇಶದಿಂದ ನಾನು ನಮ್ಮ ನೆಚ್ಚಿನ ಶಾಸಕರಾದ ತನ್ವೀರ್ ಸೇಠ್ ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಮೂರ್ತಿ ಅವರ ಸಲಹೆ ಪಡೆದು ಇಂದು ಎನ್‌ಆರ್ ಪೊಲೀಸ್ ಠಾಣೆಗೆ ೧೦ ಸಿಸಿ ಟಿವಿ ಕ್ಯಾಮೆರಾಗಳನ್ನು ಕೊಡುಗೆಯಾಗಿ ನೀಡಿದ್ದೇನೆ ಎಂದು ಹೇಳಿದರು.
ಅಜೀಝ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್ ಅವರು ಮಾತನಾಡಿ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಕೋಮು ಸೌಹಾರ್ಧತೆ ಕಾಪಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನಾವು ಕೋರಿದ್ದೇವೆ. ಅದರಂತೆ ನಮ್ಮ ಪಕ್ಷದ ಮುಖಂಡರಾದ ಡಿ.ರೇಹಾನ್ ಬೇಗ್ ಅವರು ತಾವು ಮುಂದೆ ಬಂದು ೧೦ ಕ್ಯಾಮೆರಾಗಳನ್ನು ಕೊಡುಗೆಯಾಗಿ ನೀಡಿರುವುದು ಸಂತಸದ ವಿಷಯ ಎಂದರು.
ಈ ಸಂದರ್ಭದಲ್ಲಿ ಎನ್‌ಆರ್ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್, ಎಎಸ್‌ಐ ಅನಿಲ್ ಕೆ.ಶಂಕ್‌ಪಾಲ್, ಕೆಪಿಸಿಸಿ ಮೈಸೂರು ನಗರದ ಕೋ ಆರ್ಡಿನೇಟರ್ ಶೌಕತ್ ಅಲಿ ಖಾನ್, ಕಾರ್ಮಿಕ ವಿಭಗದ ಅಧ್ಯಕ್ಷರಾದ ಮೊಹಮ್ಮದ್ ಶಿಫ್ಟನ್, ಮಝರ್, ಕಾಂಗ್ರೆಸ್ ಮುಖಂಡರಾದ ಪದ್ಮನಾಭ ಗುಂಡ, ಉಮೇಶ್ ಇದ್ದರು.