Thursday, May 15, 2025
Google search engine

Homeರಾಜಕೀಯಪಾಕಿಸ್ತಾನಕ್ಕೆ ಸಹಾಯ ಆಗುವಂತೆ ಮಾತನಾಡುವ ಕಾಂಗ್ರೆಸ್ ನಾಯಕರು: ಸಿ.ಟಿ.ರವಿ

ಪಾಕಿಸ್ತಾನಕ್ಕೆ ಸಹಾಯ ಆಗುವಂತೆ ಮಾತನಾಡುವ ಕಾಂಗ್ರೆಸ್ ನಾಯಕರು: ಸಿ.ಟಿ.ರವಿ

ಬೆಂಗಳೂರು: ದೇಶದ ವಿಚಾರದಲ್ಲೂ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ಸಹಾಯ ಆಗುವಂತೆ ಮಾತನಾಡುತ್ತಾರೆ. ಯಾಕೆ ಹೀಗೆ? ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮಗೆ ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಇದೆ. ನಾವು ಯಾವತ್ತೂ ನಮ್ಮ ಸೈನಿಕರ ಕುರಿತು ಅಪನಂಬಿಕೆ ವ್ಯಕ್ತಪಡಿಸಿಲ್ಲ. ಸೈನಿಕರ ಕ್ರೆಡಿಟ್ ಕಿತ್ತುಕೊಳ್ಳುವ ಕೆಲಸವನ್ನು ಯಾರೂ ಮಾಡಿಲ್ಲ; ಯುದ್ಧರಂಗಕ್ಕೆ ಹೋದವರು ಸೈನಿಕರೇ ಎಂದರು. ಕಾಂಗ್ರೆಸ್ಸಿನವರು ಹಿಂದೆ ಸರ್ಜಿಕಲ್ ಸ್ಟ್ರೈಕ್ ಆದಾಗ ಸಾಕ್ಷಿ ಕೇಳಿದ್ದೀರಲ್ಲವೇ ಎಂದು ಕೇಳಿದರು. ಆಗ ಸೈನಿಕರ ಕುರಿತು ಅಪನಂಬಿಕೆ ವ್ಯಕ್ತಪಡಿಸಿದ್ದೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮಗೆ ಆಗ ಸೈನಿಕರ ಬಗ್ಗೆ ನಂಬಿಕೆ ಎಲ್ಲಿ ಹೋಗಿತ್ತು? ಎಂದರಲ್ಲದೆ, ನಾವು ನಮ್ಮ ಸೈನಿಕರನ್ನು ನಂಬುತ್ತೇವೆ; ಅವರ ಬಗ್ಗೆ ನಮಗೆ ಹೆಮ್ಮೆಯೂ ಇದೆ ಎಂದು ನುಡಿದರು.1962ರ ಭಾರತ- ಚೀನಾ ಯುದ್ಧವನ್ನು ಹೊರತುಪಡಿಸಿ ಇನ್ಯಾವುದೇ ಯುದ್ಧದಲ್ಲಿ ನಮ್ಮ ಸೈನಿಕರು ಯುದ್ಧಭೂಮಿಯಲ್ಲಿ ಸೋತಿಲ್ಲ ಎಂದು ವಿವರಿಸಿದರು.

ಆಗ ಯುದ್ಧ ನಿಲ್ಲಿಸಿದ್ದೇಕೆ?
1948ರಲ್ಲಿ ಯುದ್ಧದ ವೇಳೆ ಕೇವಲ 48 ಗಂಟೆಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಕ್ಕೆ ಪಡೆಯುತ್ತೇವೆ ಎಂದು ಸೈನಿಕರು ಕೇಳಿದ್ದರು. ಯಾಕೆ ಆಗ ಯುದ್ಧ ನಿಲ್ಲಿಸಿದಿರಿ? ಪರಿಣಾಮ ಏನಾಯಿತು? ನಮ್ಮ ಕಾಶ್ಮೀರದ ಮೂರನೇ ಒಂದು ಭಾಗ ಪಾಕಿಸ್ತಾನದ ಕೈವಶವಾಯಿತು. ಇವತ್ತಿಗೂ ಪಾಕಿಸ್ತಾನದ ಕೈಯಲ್ಲೇ ಇದೆ. ಇದಕ್ಕೆ ಕಾರಣ ಯಾರು? ನಮ್ಮ ಸೈನಿಕರಲ್ಲ; ಆಗ, ಯುದ್ಧವಿರಾಮ ಬೇಡವೆಂದು ಜನರಲ್ ತಿಮ್ಮಯ್ಯನವರು ಹೇಳಿದ್ದರು; ಹಾಗೂ ಸಾಹಸ ಪ್ರದರ್ಶನ ಮಾಡಿದ್ದರು ಎಂದು ಸಿ.ಟಿ.ರವಿ ಅವರು ತಿಳಿಸಿದರು. 1965ರ ಯುದ್ಧದಲ್ಲಿ ನಮ್ಮ ಸೈನ್ಯ ಕರಾಚಿ, ಲಾಹೋರ್‌ಗೆ ಹೋಗಿತ್ತು. ಅದು ನಮಗೆ ಹೆಮ್ಮೆಯ ವಿಚಾರ. ತಾಷ್ಕೆಂಟ್ ಸಂಧಾನದ ಮೇಜಿನಲ್ಲಿ ನಾವು ಗೆದ್ದಿದ್ದನ್ನೆಲ್ಲ ಕಳಕೊಳ್ಳಬೇಕಾಯಿತು. ಅಷ್ಟು ಮಾತ್ರವಲ್ಲ; ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನೂ ಕಳಕೊಂಡೆವು ಎಂದು ಮಾಹಿತಿ ನೀಡಿದರು.

ಫಲಾನುಭವಿ ಯಾರು? ಎಂದು ಕೇಳಿದರು. ಕಾಂಗ್ರೆಸ್ಸಿಗರ ಹೇಳಿಕೆಯ ಧಾಟಿಯನ್ನು ಗಮನಿಸಿದರೆ, ಅವರು ಬಿಜೆಪಿ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಎಂದು ಭಾವಿಸಿದಂತೆ ಕಾಣುತ್ತಿದೆ. ಭಯೋತ್ಪಾದಕರು ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ. ರಾಜಕೀಯ ಪಕ್ಷಕ್ಕೆ ಮೀರಿ ಭಾರತದ ಸಾರ್ವಭೌಮತೆ, ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು, ಇಲ್ಲಿನ ಸರ್ವಧರ್ಮ, ಸಮಭಾವ, ಸಹಬಾಳ್ವೆಯನ್ನು ಪ್ರಶ್ನಿಸಿ ಹತ್ಯೆ ನಡೆಸಿದ್ದಾರೆ. ಈ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಟೀಕಿಸಿದರು.

RELATED ARTICLES
- Advertisment -
Google search engine

Most Popular