ಮೈಸೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಿದ್ದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆಯಿಲ್ಲ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಹಳೆಕೆಂಪಯ್ಯನ ಹುಂಡಿ, ಹೊಸಕೆಂಪಯ್ಯನ ಹುಂಡಿ, ರಾಯನ ಹುಂಡಿ, ಇಂಡುವಾಳು ಗ್ರಾಮಗಳಲ್ಲಿ ಜನಸಂಪರ್ಕ ಸಭೆ, ಕಂದಾಯ ಅದಾಲತ್, ಪಿಂಚಣಿ ಅದಾಲತ್, ಇಸ್ವತ್ತು ಅದಾಲತ್ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಶೇ. ೩೫ ರಷ್ಟು ಮತಗಳು ಬಂದಿವೆ. ಶೇ ೧ ರಷ್ಟು ಮತಗಳು ಕಡಿಮೆ ಬಂದಿರುವುದರಿಂದ ನಮ್ಮ ಪಕ್ಷಕ್ಕೆ ಸೋಲು ಉಂಟಾಗಿದೆ, ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವುಗಳನ್ನು ಸಮವಾಗಿ ಸ್ವೀಕರಿಸುತ್ತೇವೆ. ನಮ್ಮ ಪಕ್ಷದ ಸೋಲಿಗೆ ಕಾರಣಗಳೇನು ಎನ್ನುವುದನ್ನು ಪಕ್ಷದ ನಾಯಕರು ಚರ್ಚೆ ಮಾಡಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ನಿವೇಶನ ಸಮಸ್ಯೆ ಬಗೆಹರಿಸಿ ಕೊಡಿ. ಲೋನ್ ಕೊಡೊಸಿಕೊಡಿ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಕೊಡಿಸಿ, ಗೃಹಲಕ್ಷ್ಮಿ ಹಣ ಬಂದಿಲ್ಲ, ಊರೊಳಗಿನ ಗುಂಡಿ ಮುಚ್ಚಿಸಿಕೊಡಿ, ನಲ್ಲಿ ಹಾಕುವವರು, ಕಾಂಕ್ರಿಟ್ ರಸ್ತೆ ಅಗೆದಿದ್ದಾರೆ, ಗುಂಡಿ ಮುಚ್ಚಿಸಿಕೊಡಿ, ಸ್ಮಶಾನ ಬೇಕು, ಪೌತಿ ಖಾತೆಯಾಗಬೇಕು. ವೃದ್ದಾಪ್ಯವೇತನ, ಅಂಗವಿಕಲವೇತನ, ವಿಧವಾ ವೇತನ ಮಾಡಿಸಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಡಾ. ಯತೀಂದ್ರರವರು ಉತ್ತರಿಸಿ ನಿವೇಶನ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಮಾಡಿಕೊಡಬೇಕು. ವಿನಾಕಾರಣ ಜನರನ್ನು ಅಲೆಸಬೇಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್ ಆಪ್ತಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್, ಜಿ.ಪಂ ಮಾಜಿ ಸದಸ್ಯ ಮಹಾದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಮಹಾದೇವಣ್ಣ , ಆನಂದ, ಅಧಿಕಾರಿಗಳು ಹಾಜರಿದ್ದರು.