ಮಂಡ್ಯ: ಅನ್ನಭಾಗ್ಯ ಯೋಜನೆಗೆ ಕೇಂದ್ರಸರ್ಕಾರ ಅಕ್ಕಿ ನೀಡದಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಳೆಯ ನಡುವೆಯೇ ಪ್ರತಿಭಟನೆ ನಡೆಸಿದರು.
ನಗರದ ಸರ್ ಎಂ.ವಿ.ಪ್ರತಿಮೆ ಎದುರು ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ,ಕದಲೂರು ಉದಯ್,ಗಣಿಗ ರವಿಕುಮಾರ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ರಾಜ್ಯ ಸರ್ಕಾರದ ವತಿಯಿಂದ 5 ಕೆ.ಜಿ ಹಾಗೂ ಕೇಂದ್ರದಿಂದ 5 ಕೆ.ಜಿ ಸೇರಿ ಒಟ್ಟು 10 ಕೆ.ಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ವಿತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 2ರಂದು ಹೇಳಿದ್ದರು.ಅದರಂತೆ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಕೋರಿರುತ್ತಾರೆ.ಆಗ ಉತ್ತರಿಸಿದ ಆಹಾರ ನಿಗಮದ ಅಧಿಕಾರಿಗಳು ಜೂನ್ 12ರಂದು ಪತ್ರ ಬರೆದು ಪ್ರತಿ ಕ್ವಿಂಟಾಲ್ ಗೆ ₹ 3400 ರಂತೆ 2.20 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿರುತ್ತದೆ.ಆದರೆ ಅಚ್ಚರಿಯಂತೆ, ಕೇಂದ್ರ ಆಹಾರ ಸರಬರಾಜು ಹಾಗೂ ಸಾರ್ವಜನಿಕ ವಿತರಣಾ ಇಲಾಖೆಯ ಅಣತಿಯಂತೆ ಎಫ್ ಸಿಐ ಜೂನ್ 13ರಂದು ಪತ್ರ ಬರೆದು ಅಕ್ಕಿ ಸರಬರಾಜು ಮಾಡಲು ನಿರಾಕರಿಸುತ್ತದೆ.ಎಫ್ ಸಿಐನಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ದು ಖಾಸಗಿಯವರಿಗೆ ಸರಬರಾಜು ಮಾಡಲು ಸಿದ್ಧರಿದ್ದರೂ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ನಿರಾಕರಿಸಿರುವುದು ಗಮನಿಸಿದರೆ ಕೇಂದ್ರಕ್ಕೆ ಕನ್ನಡಿಗರ ಹಿತಾಸಕ್ತಿ ಕಾಪಾಡುವುದು ಬೇಕಿಲ್ಲ ಹಾಗೂ ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವುದು ಬೇಕಿಲ್ಲ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.
ಕೇಂದ್ರ ಆಹಾರ ನಿಗಮವು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂಬ ನೆಪ ಹೂಡಿ ₹ 2,400 ದರವನ್ನು ಪ್ರತಿ ಕ್ವಿಂಟಲ್‌ಗೆ ನಿಗದಿಪಡಿಸಿದೆ.ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಖರೀದಿಯೇ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಹಣ ಕೊಡುತ್ತೇವೆ ಕೊಡಿ ಎಂದರೂ ಕೊಡುತ್ತಿಲ್ಲ ಆ ಮೂಲಕ ರಾಜ್ಯ ಸರ್ಕಾರದ ಬಡವರ ಪರವಾದ ಮಹತ್ವಕಾಂಕ್ಷಿ ಯೋಜನೆಯನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ದೂರಿದರು.
ರಾಜ್ಯದ ಜನರ ಹಿತ ದೃಷ್ಟಿಯಿಂದ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೊಳಿಸುವುದು ನಿಶ್ಚಿತ, ಜನರ ಹಸಿವು ನೀಗಿಸಲು ಮುಂದಾಗಬೇಕಾಗಿದ್ದು,ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಸಕಾಲದಲ್ಲಿ ಅಕ್ಕಿ ಪೂರೈಸುವಂತೆ ಒತ್ತಾಯಿಸಿದರು.
ಶಾಸಕ ಗಣಿಗ ರವಿಕುಮಾರ್ ಮಾತನಾಡಿ ಕೇಂದ್ರ ಸರ್ಕಾರ ಜನಕ್ಕೆ ಅನ್ನ ಕೊಡದೆ ಉದ್ದಟತನ ತೋರುತ್ತಿದೆ.ನಾವೇನು ಚಿನ್ನದ ಗಣಿ,ಕಲ್ಲಿದಲು,ಮೈನ್ಸ್ ಕೊಡಿ ಅಂತ ಕೇಳುತ್ರಿಲ್ಲ.ಬಡವರಿಗೆ ತಲುಪುವ ಅನ್ನದಲ್ಲೂ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಿಜೆಪಿ ಎದರುತ್ತಿದೆ.ಕಾಂಗ್ರೆಸ್ ಪಕ್ಷ ಬಡವರ ಪರ ಇದೆ.5ಕೆ.ಜಿ.ಅಕ್ಕಿ, ವೃದ್ದಾಪ್ಯ ವೇತನ ತಡೆದರು.ರಾಜ್ಯ ಸರ್ಕಾರ ಹೋಯಿತು ಕೇಂದ್ರದ ಅಧಿಕಾರ ಹೋಗುತ್ತೆ ಅನ್ನೋ ಭಯ ಕಾಡುತ್ತಿದೆ ಎಂದರು.
ನಾವು ಅಕ್ಕಿ ಕೊಡುವುದು ಶತ ಸಿದ್ದ, ಇಂದಿರಾ ಕ್ಯಾಂಟಿನ್ ಆರಂಭಿಸೋದು,ಮುಂದಿನ ಐದು ವರ್ಷಕ್ಕೂ ನಮ್ಮ ಯೋಜನೆ ಕೊಡುತ್ತೇವೆ.ಜನರಿಗೆ ತೊಂದರೆಯಾಗದ ರೀತಿ ಮೊಬೈಲ್ ವ್ಯಾನ್ ಬಿಟ್ಟು ಗ್ಯಾರಂಟಿ ಯೋಜನೆಗಳ ನೊಂದಣಿ ಕಾರ್ಯ ಮಾಡಿ ಸರ್ಕಾರದ ಸವಲತ್ತುಗಳನ್ನು ಮನೆ ಮನೆಗೆ ತಲುಪಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ,ಮಾಜಿ ಶಾಸಕರಾದ ಎಚ್.ಬಿ.ರಾಮು, ಕೆ.ಬಿ.ಚಂದ್ರಶೇಖರ್,ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ,ಕೀಲಾರ ರಾಧಾಕೃಷ್ಣ. ಬಿ.ರೇವಣ್ಣ,ಕೋಡಿಹಳ್ಳಿ ಚನ್ನೇಗೌಡ, ಚಂದೂಪುರ ಪಾಪಣ್ಣ,ಎಂ.ಎಸ್. ಚಿದಂಬರ್,ಅಂಜನಾ ಶ್ರೀಕಾಂತ್, ಟಿ.ಎಸ್.ಸತ್ಯಾನಂದ.ಸಿ.ಎಂ. ದ್ಯಾವಪ್ಪ,ಸಿದ್ದಾರೂಢ ತ್ಯಾಗರಾಜು, ವಿಜಯಲಕ್ಷ್ಮಿ, ಸುರೇಶ್ ಕಂಠಿ,ಪಕ್ಷದ ನಗರಸಭೆ ಸದಸ್ಯರು,ಪಕ್ಷದ ಮುಖಂಡರು ಇದ್ದರು.