ಮೈಸೂರು: ಕೇಂದ್ರ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಗಾಂಧಿ ಚೌಕದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ. ದೇಶದ ಸಂವಿಧಾನ ಬುಡಮೇಲು ಮಾಡುವ ಕೃತ್ಯಕ್ಕೆ ಸಂಚು ರೂಪಿಸುತ್ತಿದೆ. ವಿರೋಧಿಗಳನ್ನು ಸುಳ್ಳು ಪ್ರಕರಣ ದಾಖಲಿಸಿ ವಿಪಕ್ಷಗಳನ್ನು ಮುಗಿಸಲು ಸಂಚು ರೂಪಿಸುತ್ತದೆ. ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ್ದು ಕೂಡ ಸಂಚಿನ ಮತ್ತೊಂದು ಭಾಗ ಎಂದು ಅವರು ಆರೋಪಿಸಿದರು.
ಪ್ರತಿಭಟನೆ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್‌ಗಳಾದ ಪುರುಷೋತ್ತಮ್, ಪುಷ್ಪಲತಾ ಚಿಕ್ಕಣ್ಣ, ಬಿ.ಕೆ.ಪ್ರಕಾಶ್, ಮೋದಾಮಣಿ, ಮುಖಂಡರಾದ ಎಂ.ಶಿವಣ್ಣ, ಈಶ್ವರ್ ಚಕ್ಕಡಿ, ವೆಂಕಟೇಶ್, ಎಂ.ಕೆ.ಅಶೋಕ್, ಸುನಂದಕುಮಾರ್, ರವೀಂದ್ರ, ಗಿರೀಶ್, ರಾಜೇಶ್, ಡೈರಿ ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.