ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕು ಕಾಂಗ್ರೆಸ್ ನಿವೃತ್ತ ಶಿಕ್ಷಕರ ಘಟಕದ ಜತೆಗೆ ಸಾಲಿಗ್ರಾಮ ತಾಲೂಕಿನಲ್ಲಿಯೂ ನೂತನ ಘಟಕ ರಚನೆ ಮಾಡಿ ಶೀಘ್ರದಲ್ಲಿಯೇ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೆಗೌಡ ಹೇಳಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಮತ್ತು ನಿವೃತ್ತ ಶಿಕ್ಷಕರ ಕಾಂಗ್ರೆಸ್ ಘಟಕದ ವತಿಯಿಂದ ಮಂಗಳವಾರ ಪಟ್ಟಣದ ಮುಳ್ಳೂರು ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಶಾಂತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಸಮಾಜವನ್ನು ಸರಿದಾರಿಗೆ ತರುವ ಶಿಕ್ಷಕರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಪಡಿಸಲು ಎಲ್ಲರೂ ಮುಂದಾಗೋಣ ಎಂದರು.
ಉತ್ತಮವಾಗಿ ಸಂಘಟನೆ ಮಾಡುವ ನಿವೃತ್ತ ಶಿಕ್ಷಕರನ್ನು ಗುರುತಿಸಿ ಪದಾಧಿಕಾರಿಗಳ ಸ್ಥಾನ ನೀಡಿ ಅವರುಗಳ ಶಕ್ತಿ ಮತ್ತು ಸಂಪರ್ಕವನ್ನು ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದ ಅವರು ನಾನು ಈ ಘಟಕದ ಹಿಂದೆ ಬೆನ್ನೆಲುಬಾಗಿ ನಿಲ್ಲುತ್ತೇನೆಂದು ಭರವಸೆ ನೀಡಿದರು.
ಕೆಪಿಸಿಸಿ ನಿವೃತ್ತ ಶಿಕ್ಷಕರ ಘಟಕ ಆರಂಭಿಸುವಂತೆ ಸೂಚನೆ ನೀಡಿದ ನಂತರ ಪ್ರಥಮವಾಗಿ ಕೆ. ಆರ್. ನಗರದಲ್ಲಿ ಘಟಕ ಆರಂಭಿಸಿ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು ಇದು ಅತ್ಯಂತ ಸಂತಸದ ವಿಚಾರ ಎಂದರು.
ತಳ ಮಟ್ಟದಿಂದ ಸಂಪರ್ಕ ಹೊಂದಿರುವ ನಿವೃತ್ತ ಶಿಕ್ಷಕರನ್ನು ಸದ್ಬಳಕೆ ಮಾಡಿಕೊಂಡು ಪಕ್ಷ ಸಂಘಟನೆ ಮಾಡುವುದರ ಜೊತೆಗೆ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಪಕ್ಷದ ಪದಾಧಿಕಾರಿಗಳು ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಶಾಸಕ ಡಿ. ರವಿಶಂಕರ್ ಮಾತನಾಡಿ ಪಕ್ಷ ಸಂಘಟನೆಯ ಹಿತ ದೃಷ್ಟಿಯಿಂದ ಕೆಪಿಸಿಸಿ ಈ ಹೊಸ ಚಿಂತನೆ ನಡೆಸಿ ನಿವೃತ್ತ ಶಿಕ್ಷಕರ ಘಟಕ ಆರಂಭಿಸಿರುವುದು ಉತ್ತಮವಾದ ಯೋಚನೆಯಾಗಿದ್ದು ಮುಂದಿನ ದಿನಗಳಲ್ಲಿ ಈ ಸಂಘಟನೆ ಉತ್ತಮವಾಗಿ ಕೆಲಸ ಮಾಡಬೇಕೆಂದು ಆಶಿಸಿದರು.
ನಿವೃತ್ತ ಶಿಕ್ಷಕರಾದ ಕೆ.ಪಿ. ಸೋಮಶೇಖರಯ್ಯ, ರಾಜನಾಯಕ, ಎಂ.ಎಲ್. ವಿಶ್ವನಾಥ್, ಡಿ.ಜೆ. ರಮೇಶ್, ಸಿ. ಎಚ್. ಪರಶುರಾಮ್, ಕೃಷ್ಣಯ್ಯ ಅವರುಗಳಿಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ನಿವೃತ್ತ ಶಿಕ್ಷಕರ ಕಾಂಗ್ರೆಸ್ ಘಟಕದ ಅಧ್ಯಕ್ಷ ಜವರೇಗೌಡ, ಉಪಾಧ್ಯಕ್ಷರಾದ ಮೋಹನಕುಮಾರ್, ಕೆಂಚಪ್ಪ, ತಾಲೂಕು ಘಟಕದ ಅಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಕೆ. ಬಿ. ಪುಟ್ಟರಾಜೇಗೌಡ, ಪದಾಧಿಕಾರಿಗಳಾದ ಮಾಯಯ್ಯ, ಎಂ. ಎಸ್. ಸ್ವಾಮಿ, ರಾಮೇಗೌಡ, ಕೃಷ್ಣ, ದೊಡ್ಡಯ್ಯ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯ್ಯದ್ ಜಾಬೀರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಸ್. ಮಹೇಶ್, ಜಿ.ಪಂ.ಮಾಜಿ ಸದಸ್ಯ ಶಿವರಾಂ, ಪುರಸಭೆ ಸದಸ್ಯ ನಟರಾಜು, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್ ಮತ್ತಿತರರು ಇದ್ದರು.