ಬೆಂಗಳೂರು: ಅಧಿಕಾರಿಗಳು ಮತ್ತು ರೈತರ ಆತ್ಮಹತ್ಯೆ, ಬಾಣಂತಿಯರ ಸಾವು, ಪೊಲೀಸರ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳ ಬಳಕೆ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ರಾಜ್ಯಸರ್ಕಾರವನ್ನು ಬೊಟ್ಟು ಮಾಡಿರುವ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು, ರಾಜ್ಯದಲ್ಲಿ ಕೊಲೆ, ಬೆದರಿಕೆ, ಆತ್ಮಹತ್ಯೆಗೆ ಸುಪಾರಿ ನೀಡಲು ಕಾಂಗ್ರೆಸ್‌ನ ಗ್ಯಾಂಗ್ ಅನ್ನು ಸಂಪರ್ಕಿಸಿ ಎಂದು ಒಬ್ಬೊಬ್ಬರ ಹೆಸರನ್ನು ಬರೆದುಕೊಂಡಿದೆ.
‘ಧಮ್ಕಿಗೆ – ಡಿಕೆ ಶಿವಕುಮಾರ್, ಕೊಲೆಗೆ – ವಿನಯ್ ಕುಲಕರ್ಣಿ, ಆತ್ಮಹತ್ಯೆಗೆ ಸುಪಾರಿ – ಪ್ರಿಯಾಂಕ್ ಖರ್ಗೆ, ಶಾಸಕರ ಕೊಲೆಗೆ – ಲಕ್ಷ್ಮಿ ಹೆಬ್ಬಾಳ್ಕರ್, ರೈತರು ಮತ್ತು ಅಧಿಕಾರಿಗಳ ಹತ್ಯೆಗೆ – ಸಿದ್ದರಾಮಯ್ಯ, ಆಸ್ಪತ್ರೆಗಳಲ್ಲಿ ಕೊಲೆಗೆ – ದಿನೇಶ್ ಗುಂಡೂರಾವ್, ದಲಿತರ ಮೇಲಿನ ಹಲ್ಲೆಗೆ – ಹಿರಿಯೂರು ಡಿ. ಸುಧಾಕರ್, ಪೊಲೀಸರ ಮೇಲೆ ಹಲ್ಲೆಗೆ – ವಿಜಯಾನಂದ ಕಾಶಪ್ಪನವರ್, ಅವಾಚ್ಯ ಶಬ್ದ ಬಳಸಿ ಬೈಯಲು – ಅರಸೀಕೆರೆ ಶಿವಲಿಂಗೇಗೌಡ ಅವರನ್ನು ಸಂಪರ್ಕಿಸಿ. ಅವಶ್ಯಕತೆ ಇರುವವರು ಸಂಪರ್ಕಿಸಬೇಕಾದ ವಿಳಾಸ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿ’ ಎಂದು ಬರೆದುಕೊಂಡಿದೆ.
‘ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಪ್ರಕರಣ, ಬಾಣಂತಿಯರ ಸಾವು ಪ್ರಕರಣದಲ್ಲಿ ಸರ್ಕಾರ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ, ‘ಇದು ಸುಸೈಡ್, ಸುಪಾರಿ ಸರ್ಕಾರ. ಸಿದ್ದರಾಮಯ್ಯ, ಶಿವಕುಮಾರ್ ಎರಡು ʼSʼ ಗಳಿದ್ದಂತೆ. ಸುಪಾರಿ ಕೊಲೆ, ರೈತರ ಆತ್ಮಹತ್ಯೆ, ಬಾಣಂತಿಯರ ಸಾವು, ಇವು ಈ ಸರ್ಕಾರದಲ್ಲಿ ಸಾಮಾನ್ಯವಾಗಿದೆ. ದುಡ್ಡಿನ ದಾಹದಿಂದ ಕಳಪೆ ಔಷಧಿ ವಿತರಿಸಿ, ಬಾಣಂತಿಯರ ಸಾವಿಗೆ ಈ ಸರ್ಕಾರ ಕಾರಣವಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗುಡುಗಿದ್ದಾರೆ.