ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕಾಗಿ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ. ಬರೀ ಸುಳ್ಳು ಹೇಳುತ್ತಾರೆ. ಸಾರಿಗೆ ನೌಕರಿಗೆ ಸಂಬಳ ನೀಡಲು ಇವರಿಗೆ ಆಗುತ್ತಿಲ್ಲ. ಸಾರಿಗೆ ಸಂಸ್ಥೆಗಳಿಗೆ ಸಾಲ ಮಾಡಲು ಅನುಮತಿ ನೀಡಿರುವುದನ್ನು ನೋಡಿದರೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುವುದು ಸ್ಪಷ್ಟ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಇದೀಗ ಸುಳ್ಳುಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ. ಎಲ್ಲಾ ದರ ಏರಿಕೆ ಮಾಡಿ ಜನ ಸಾಮಾನ್ಯರ ನಿತ್ಯದ ಜೀವನಕ್ಕೆ ಕುತ್ತು ತಂದಿದೆ. ವಿದ್ಯುತ್ ದರ, ಹಾಲಿನದರ, ಡೀಸೆಲ್, ಪೆಟ್ರೋಲ್ ದರ ರಾಜ್ಯದಲ್ಲಿ ಏರಿಕೆ ಮಾಡಿದ್ದಾರೆ. ಆಸ್ತಿ ನೊಂದಣಿ, ಮದ್ಯದ ದರ ಏರಿಕೆ ಮಾಡಿದ್ದರು ಈಗ ಬಸ್ ದರ ಏರಿಕೆ ಮಾಡಿದ್ದಾರೆ ಎಂದರು.
ಬಹುತೇಕ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ. ದರ ಏರಿಸುವ ಮೂಲಕ ಒಬ್ಬರಿಂದ ಕಸಿದು ಇನ್ನೊಬ್ಬರಿಗೆ ಕೊಡುವ ಕೆಲಸ ಸರಕಾರದಿಂದ ನಡೆಯುತ್ತಿರುವುದು ದುರಾಡಳಿತಕ್ಕೆ ಉದಾಹರಣೆಯಾಗಿದೆ. ಜನಪ್ರತಿನಿಧಿಗಳನ್ನು ಸುಪಾರಿ ಕೊಟ್ಟು ಮುಗಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕೊಲೆ, ಸುಲಿಗೆ, ದರೋಡೆ ಹೆಚ್ಚಾಗಿದೆ. ರಾಜು ಕಪನೂರ ಯಾಕೆ ಬಂಧನವಾಗಿಲ್ಲ. ಇತನ ಮೇಲೆ ಯಾರ ಕೃಪೆ ಆರ್ಶಿವಾದವಿದೆ ಎಂದು ಆರೋಪಿಸಿದರು.