ಮೈಸೂರು: ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ೫ ಕೆ.ಜಿ ಅಕ್ಕಿ ಕೊಡಲು ನಿರಾಕರಿಸಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಪ್ರತಾಪಸಿಂಹ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಕೇಂದ್ರದ ಕ್ರಮ ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ರಾಜ್ಯದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಜಲದರ್ಶಿನಿ ಬಳಿ ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪ್ರತಾಪಸಿಂಹ ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ರಾಜ್ಯಕ್ಕೆ ಅಕ್ಕಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸದ ಸಂಸದರಿಗೆ ಧಿಕ್ಕಾರ, ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ, ಪೇಪರ್ ಸಿಂಹ ಅಕ್ಕಿ ಕೊಡ್ಸಪ್ಪ ಎಂದು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಬಳಿಕ ಗೇಟಿನ ಮುಂಭಾಗ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಡವರಿಗೆ ನೀಡುವ ಅಕ್ಕಿಯಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ದಾಸ್ತಾನಿದ್ದರೂ ಅಕ್ಕಿ ಕೊಡದೆ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಹೆಚ್ಚುವರಿ ಅಕ್ಕಿಗೆ ಹಣ ನೀಡುತ್ತೇವೆ ಎಂದರೂ ಕೊಡುತ್ತಿಲ್ಲ. ಕೇಂದ್ರದ ಮೇಲೆ ಒತ್ತಡ ಹೇರಿ ಅಕ್ಕಿ ಕೊಡಿಸಬೇಕಾದ ಬಿಜೆಪಿ ಸಂಸದರು ಸುಮ್ಮನಿದ್ದಾರೆ. ಪ್ರತಾಪಸಿಂಹ ಅವರು ಕಾಂಗ್ರೆಸ್ ವಿರುದ್ಧ ಮಾತನಾಡುವ ಬದಲು ಕೇಂದ್ರದ ಮೇಲೆ ಒತ್ತಡ ಹೇರಿ ಅಕ್ಕಿ ಕೊಡಿಸಲಿ. ಬಡವರಿಗೆ ಒಳ್ಳೆಯ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ನಗರಾದ್ಯಕ್ಷ ಸೈಯದ್ ಅಬ್ರಾರ್, ರಫೀಕ್, ಚಂದ್ರು, ಪ್ರತಾಪ್, ನಿಶಾಂತ್, ನಿತಿನ್, ಶಶಿ, ಕೆಂಪರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.