Wednesday, April 23, 2025
Google search engine

Homeರಾಜ್ಯಕಾಂಗ್ರೆಸ್ಸಿನ ವಕ್ಫ್ ನೀತಿಯಿಂದ ರೈತರ ಕಣ್ಣೀರು: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ಸಿನ ವಕ್ಫ್ ನೀತಿಯಿಂದ ರೈತರ ಕಣ್ಣೀರು: ಬಿ.ವೈ. ವಿಜಯೇಂದ್ರ

ಶಹಾಪುರ: ರಾಜ್ಯ ಕಾಂಗ್ರೆಸ್ ಸರಕಾರದ ವಕ್ಫ್ ನೀತಿಯಿಂದ ರೈತರು ಕಣ್ಣೀರು ಹಾಕುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಇಂದು ಗುರುವಾರ ನಡೆದ ವಕ್ಫ್ ನೀತಿ ಖಂಡಿಸಿ ನಡೆದ ಬೃಹತ್ ಹೋರಾಟದಲ್ಲಿ ಅವರು ಮಾತನಾಡಿದರು. ಬಿಜೆಪಿಯ ಎಲ್ಲ ಮುಖಂಡರು ಇವತ್ತು ರಾಜ್ಯಾದ್ಯಂತ ರೈತರ ಪರ ಹೋರಾಟ ಮಾಡುತ್ತಿದ್ದೇವೆ. ಅಧಿಕಾರಕ್ಕೋಸ್ಕರ ಈ ಹೋರಾಟವಲ್ಲ ಎಂದು ಸ್ಪಷ್ಟಪಡಿಸಿದರು. ಬೀದರ್‍ನಲ್ಲಿ ನಾವು ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಮಾಡಿದ್ದು, ೧೦ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ನಿನ್ನೆ ಸಂಜೆ ಗುಲ್ಬರ್ಗದಲ್ಲಿ ಏಳೆಂಟು ಸಾವಿರ ರೈತರು ಬೃಹತ್ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದು ವಿವರಿಸಿದರು.

ವಿಜಯೇಂದ್ರ ಅವರೇ, ದಯವಿಟ್ಟು ದುಷ್ಟ ಕಾಂಗ್ರೆಸ್ ಸರಕಾರದಿಂದ ನಮ್ಮನ್ನು ಕಾಪಾಡಿ ಎಂಬ ಕೂಗು ಎಲ್ಲರಿಂದ ಬರುತ್ತಿದೆ. ೫೦-೬೦ ವರ್ಷಗಳಿಂದ ಉಳುಮೆ ಮಾಡುತ್ತಿರುವ ನಮ್ಮ ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಮಾಡಿದ್ದಾರೆ. ೧೯೭೪ರ ಗಜೆಟ್ ಅಧಿಸೂಚನೆಯನ್ನು ನೆಪ ಮಾಡಿಕೊಂಡು ರೈತರ ಜಮೀನುಗಳಲ್ಲಿ ವಕ್ಫ್ ಭೂಮಿ ಎಂದು ಸರಕಾರ ನಮೂದಿಸುತ್ತಿದೆ ಎಂದು ರೈತರು ಆತಂಕದಿಂದ ತಿಳಿಸುತ್ತಿದ್ದಾರೆ ಎಂದು ಹೇಳಿದರು.

ವಿಶ್ವಗುರು ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ನಮ್ಮ ಭೂಮಿ ನಮ್ಮ ಹಕ್ಕು ಬೃಹತ್ ಪಾದಯಾತ್ರೆ ನಡೆಸಿ ರೈತರ, ಬಡವರ, ಮಠ – ಮಂದಿರಗಳ ಜಮೀನುಗಳನ್ನು ಅಕ್ರಮವಾಗಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನದ ಮೂಲಕ ಎಚ್ಚರಿಸಲಾಯಿತು. ಓಲೈಕೆ ರಾಜಕಾರಣಕ್ಕಾಗಿ ಅನ್ನದಾತರ ಭೂಮಿ ಕಿತ್ತುಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ಸರ್ಕಾರ ಈ ಕೂಡಲೇ ರೈತವಿರೋಧಿ ಕಾಯ್ದೆ ರದ್ದುಪಡಿಸುವಂತೆ ಆಗ್ರಹಿಸಲಾಯಿತು. ಅನ್ನದಾತರ ಒಂದಿಂಚೂ ಭೂಮಿ ಕಸಿಯಲು ಬಿಜೆಪಿ ಬಿಡುವುದಲ್ಲ ಎಂದು ಬಿಜೆಪಿ ಪ್ರಮುಖರು ತಿಳಿಸಿದರು.

ಮಾಜಿ ಸಚಿವರಾದ ಬಿ.ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷರಾದ ಬಿ.ಎ.ಬಸವರಾಜ, ರಾಜುಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಸುನಿಲ್ ವಲ್ಯಾಪುರೆ, ರಾಜ್ಯ ಕಾರ್ಯದರ್ಶಿ ಕು.ಲಲಿತಾ ಆನಪುರ್, ಜಿಲ್ಲಾಧ್ಯಕ್ಷ ಅಮಿನ್ ರೆಡ್ಡಿ ಯಾಳಗಿ, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular