Saturday, April 12, 2025
Google search engine

Homeಸ್ಥಳೀಯಜಲಮೂಲ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಮೃಗಾಲಯ ಸಿಇಒ ಮಹೇಶ್ ಕುಮಾರ್

ಜಲಮೂಲ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಮೃಗಾಲಯ ಸಿಇಒ ಮಹೇಶ್ ಕುಮಾರ್

ತಿಪ್ಪಯ್ಯನ ಕೆರೆ ವ್ಯಾಪ್ತಿಯಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯ

ಮೈಸೂರು:ಸ್ವಚ್ಚ ಭಾರತ್ ಅಭಿಯಾನದ ಮುಂದುವರೆದ ಭಾಗವಾಗಿ ನಗರದ ಪೊಲೀಸ್ ಬಡಾವಣೆಯಲ್ಲಿ ಭಾನುವಾರ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಪೊಲೀಸ್ ಬಡಾವಣೆಯ ಎರಡನೇ ಹಂತದಲ್ಲಿರುವ (ಸರ್ದಾರ್ ವಲ್ಲಭಭಾಯ್ ಪಟೇಲ್ ನಗರ) ತಿಪ್ಪಯ್ಯನ ಕೆರೆ ಸುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ಭಾನುವಾರ ನಡೆದ ಸ್ವಚ್ಚತಾ ಕಾರ್ಯದಲ್ಲಿ ಬಡಾವಣೆಯ ‌ನಿವಾಸಿಗಳು ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ಸ್ವಚ್ಚತಾ ಕಾರ್ಯ ಆರಂಭಕ್ಕೂ ಮುನ್ನ ಸ್ವಚ್ಚತೆಯಿಂದ ಮನೆ, ಮನ, ಪರಿಸರ ಹಾಗೂ ದೇಶಕ್ಕಾಗುವ ಲಾಭದ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸಲಾಯಿತಲ್ಲದೆ, ಸದಾ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮೈಸೂರಿನ ಪ್ರಮುಖ ಹಾಗೂ ಅತಿ ದೊಡ್ಡ ಕೆರೆಗಳ ಪೈಕಿ ತಿಪ್ಪಯ್ಯನ ಕೆರೆ ಕೂಡ ಒಂದಾಗಿದ್ದು, ಇದನ್ನು ಮುಂದಿನ ತಲೆಮಾರಿಗೆ ಜತನದಿಂದ ಕಾಪಾಡಬೇಕಿದೆ. ಮೃಗಾಲಯ ಪ್ರಾಧಿಕಾರ ತನ್ನ ಇತಿಮಿತಿಯಲ್ಲಿ ಕೆರೆ ಸಂರಕ್ಷಣೆ ಮಾಡಬಹುದು. ಆದರೆ, ಇದನ್ನು ಸಂರಕ್ಷಿಸಬೇಕಾದ ಹೊಣೆ ಸ್ಥಳೀಯ ನಾಗರಿಕರ ಜವಾಬ್ದಾರಿಯಾಗಿದೆ ಎಂಬ ವಿಚಾರವನ್ನು ಮನದಟ್ಟು ಮಾಡಿಕೊಡಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್, ಮೈಸೂರು ಪ್ರಕೃತಿದತ್ತವಾದ ನಗರವಾಗಿದ್ದು, ಇಡೀ ದೇಶದಲ್ಲೇ ಭೌಗೋಳಿಕವಾಗಿ ತನ್ನದೇ ಆದ ಸ್ಥಾನ ಕಂಡುಕೊಂಡಿದೆ. ಇಂತಹ ನಗರವನ್ನು ಸ್ವಚ್ಚವಾಗಿರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ಕೆರೆಗಳು ಜಲಮೂಲದ ಪ್ರಮುಖ ತಾಣಗಳಾಗಿದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮೈಸೂರಿನಲ್ಲಿರುವ ಕೆಲವೇ ದೊಡ್ಡ ಕೆರೆಗಳ ಪೈಕಿ ಚಾಮುಂಡಿ ಬೆಟ್ಟದ ಮಗ್ಗುಲಲ್ಲಿರುವ ತಿಪ್ಪಯ್ಯನ ಕೆರೆ ಕೂಡ ಒಂದಾಗಿದೆ. ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಕೆರೆ ಸುತ್ತಮುತ್ತ ಸ್ಥಳೀಯರು ಕಸ ಸುರಿಯುತ್ತಿರುವುದು ಅತ್ಯಂತ ಬೇಸರದ ವಿಚಾರ. ಬದಲಾದ ಪರಿಸ್ಥಿತಿಯಲ್ಲಿ ಪರಿಸರದ ಮೇಲೆ‌ ಮಾನವನ ಸವಾರಿ ನಡೆದಿದ್ದು, ಇದನ್ನು ತಪ್ಪಿಸಬೇಕಿದೆ. ಅದಕ್ಕಾಗಿ ಕೆರೆ ಆಸುಪಾಸಿನಲ್ಲಿರುವ ಬಡಾವಣೆಗಳ ನಾಗರಿಕರು ಗರಿಷ್ಠ ಪ್ರಮಾಣದ ಕಾಳಜಿಯನ್ನು ಕೆರೆಗೆ ಮೀಸಲಿಡಬೇಕಾದ ಅನಿವಾರ್ಯತೆ ಇದೆ ಎಂದು ಸೂಚ್ಯವಾಗಿ ತಿಳಿಸಿದರು.

ಬೆಳಗ್ಗೆ ಎಂಟು ಗಂಟೆಯಿಂದ ಆರಂಭವಾದ ಸ್ವಚ್ಚತಾ ಕಾರ್ಯದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್, ರಮ್ಮನಹಳ್ಳಿ ಪಟ್ಟಣ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಮೂರ್ತಿ, ಕಿರಿಯ ಆರೋಗ್ಯ ನಿರ್ವಾಹಕ ಚನ್ನನಾಯಕ, ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಥಾಮಸ್, ಸ್ಥಳೀಯರಾದ ಮನುಕುಮಾರ್, ಮಾನಸ, ಮೋಹನ ಕುಮಾರ್, ಶಿವಸ್ವಾಮಿ, ಲೀಲಾ ಶಿವಕುಮಾರ್, ಬಿ.ಎಲ್. ತ್ರಿಪುರಾಂತಕ, ಮೋಹನರಾವ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಪೌರಕಾರ್ಮಿಕ ಸಿಬ್ಬಂದಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular