Saturday, April 19, 2025
Google search engine

Homeರಾಜ್ಯಸುದ್ದಿಜಾಲಸಂವಿಧಾನ ಜಾಗೃತಿ ಜಾಥಾ : ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಭೆ

ಸಂವಿಧಾನ ಜಾಗೃತಿ ಜಾಥಾ : ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಭೆ

ಚಾಮರಾಜನಗರ: ಭಾರತ ಸಂವಿಧಾನದ ಆಚರಣೆ ಮತ್ತು ಈ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ಸಂವಿಧಾನ ಜಾಗೃತಿ ಜಾಥ ಮತ್ತು ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು, ಇದಕ್ಕೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸಂವಿಧಾನ ಜಾಗೃತಿ ಜಾಥ ಮತ್ತು ಕಾರ್ಯಕ್ರಮ ಸಂಬಂಧ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂವಿಧಾನ ದಿನಾಚರಣೆಯ ಪ್ರಯುಕ್ತ ಜನವರಿ 26ರಂದು ಸಂವಿಧಾನ ಜಾಗೃತಿ ಜಾಥಾ ಮತ್ತು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತ ಎರಡು ಸ್ತಬ್ದ ಚಿತ್ರದ ಮೆರವಣಿಗೆಗೆ ಅಂದು ಚಾಲನೆ ನೀಡಲಾಗುತ್ತದೆ. ಈ ಜಾಗೃತಿ ಸ್ತಬ್ದ ಚಿತ್ರಗಳು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ತಲುಪಲಿವೆ. ಜನವರಿ 26ರಂದು ಆರಂಭವಾಗಲಿರುವ ಜಾಗೃತಿ ಸ್ತಬ್ದ ಚಿತ್ರಗಳ ಮೆರವಣಿಗೆ ಫೆಬ್ರವರಿ 23ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಯವರು ವಿವರಿಸಿದರು.

ಭಾರತ ಸಂವಿಧಾನ ಮತ್ತು ಏಕತೆ ಕಾರ್ಯಕ್ರಮವನ್ನು ಆಚರಿಸುವ ನಿಟ್ಟಿನಲ್ಲಿ ಸಂವಿಧಾನ ಮಹತ್ವ ಜಾಗೃತಿ ಕುರಿತ ವೀಡಿಯೋ ಕ್ಲಿಪ್ಪಿಂಗ್ಸ್ ಹೊಂದಿದ ಎಲ್.ಇ.ಡಿ ವಾಹನಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಲಿವೆ. ಈ ವೇಳೆ ಸಂವಿಧಾನ ಪೀಠಿಕೆಯ ಪ್ರತಿಗಳ ವಿತರಣೆ ಸಹ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಸರ್ವರು ಸಹಕರಿಸಿ ಯಶಸ್ವಿಗೊಳಿಸಬೇಕು ಎಂದರು. ಸಭೆಯಲ್ಲಿ ಹಾಜರಿದ್ದ ಮುಖಂಡರು ಮಾತನಾಡಿ ಸ್ತಬ್ದ ಚಿತ್ರಗಳು ಸಾಗಲಿರುವ ಗ್ರಾಮಗಳು ಮಾರ್ಗಗಳ ಬಗ್ಗೆ ಮೊದಲೇ ತಿಳಿಸಬೇಕು. ಸ್ತಬ್ದ ಚಿತ್ರಗಳನ್ನು ಆಯಾ ಭಾಗಗಳಲ್ಲಿ ಸ್ವಾಗತಿಸಬೇಕು. ಹೀಗಾಗಿ ಊರಿನ ಮುಖಂಡರು, ಜನಪ್ರತಿನಿಧಿಗಳು, ಸಂಘಟನೆಗಳ ಪ್ರತಿನಿಧಿಗಳಿಗೆ ವಿವರ ನೀಡಬೇಕು. ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಂವಿಧಾನದ ಮಹತ್ವವನ್ನ ತಿಳಿಸಿಕೊಡುವ ಕಾರ್ಯವಾಗಬೇಕು ಎಂದರು.

ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ಮಟ್ಟದಲ್ಲಿ ಸಭೆ ಕರೆದು ಸುವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆಯಾಗಬೇಕು. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಇನ್ನಿತರ ಅಧಿಕಾರಿಗಳಿಗೆ ಸೂಚನೆ ನೀಡಿ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಹೇಳಬೇಕು. ಹಬ್ಬದ ಮಾದರಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಂವಿಧಾನ ಜಾಗೃತಿ ಮೂಡಿಸಬೇಕು ಎಂಬುದೂ ಸೇರಿದಂತೆ ಕಾರ್ಯಕ್ರಮ ಏರ್ಪಾಡು ಸಂಬಂಧ ಇನ್ನಿತರ ಸಲಹೆಗಳನ್ನು ಮುಖಂಡರು ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಬದ್ದತೆ ಹಾಗೂ ಗಂಭೀರತೆಯಿಂದ ಮಾಡಲಿದ್ದೇವೆ. ಇದಕ್ಕಾಗಿಯೇ ಪ್ರತ್ಯೇಕ ಕಾರ್ಯ ವಿಧಾನಗಳನ್ನು ರೂಪಿಸಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ನಿರ್ದೇಶನ ನೀಡಲಾಗಿದೆ. ಸಭೆಯಲ್ಲಿ ಮುಖಂಡರು ನೀಡಿರುವ ಸಲಹೆ ಅಭಿಪ್ರಾಯಗಳನ್ನು ಪರಿಗಣಿಸಲಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ್, ಸಂಘಟನೆಗಳ ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ಸೋಮಶೇಖರ ಬಿಸಲವಾಡಿ, ಅರಕಲವಾಡಿ ನಾಗೇಂದ್ರ, ಸಿ.ಕೆ. ರವಿಕುಮಾರ್, ರಾಮಸಮುದ್ರ ನಾಗರಾಜು, ಅಣಗಳ್ಳಿ ಬಸವರಾಜು, ಕೆ.ಎಂ. ನಾಗರಾಜು, ಚಾ.ಗು. ನಾಗರಾಜು, ಸಿ.ಎಂ. ನರಸಿಂಹಮೂರ್ತಿ, ರಾಜಶೇಖರ್, ಜಿ.ಬಂಗಾರು, ರಾಮಸಮುದ್ರ ಸುರೇಶ್, ಶ್ರೀಕಂಠ, ವಾಸು, ಸುಭಾಷ್ ಮಾಡ್ರಹಳ್ಳಿ, ಸಿ.ಎಂ. ಶಿವಣ್ಣ, ಕಂದಹಳ್ಳಿ ನಾರಾಯಣ, ಪಿ. ಸಂಘಸೇನಾ, ಶಿವಣ್ಣ (ಮಾಸ್ಟರ್), ಆಲೂರು ನಾಗೇಂದ್ರ, ರಾಜಣ್ಣ, ಗೋವಿಂದರಾಜು, ಬ್ಯಾಡಮೂಡ್ಲು ಬಸವಣ್ಣ, ಗುರುರಾಜ್, ನಾಗೇಶ್, ಇತರೆ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular