ಕಲಬುರಗಿ: ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ನಿಮಿತ್ಯ ಸಂವಿಧಾನದ ಮಹತ್ವ ಮತ್ತು ಅದರ ಮೂಲ ಆಶಯಗಳನ್ನು ಜನರಿಗೆ ತಿಳಿಸಲು ಕಳೆದ ಜನವರಿ 26 ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಚಾಲನೆ ಪಡೆದ ಸಂವಿಧಾನ ಜಾಗೃತಿ ಜಾಥಾವು ಜಿಲ್ಲೆಯಲ್ಲಿ ಅರಿವಿನ ಜನಾಂದೋಲನ ರೂಪ ಪಡೆಯುತ್ತಿದ್ದು, ಜಾತಿ ಬೇಧವಿಲ್ಲದೆ ಜನರು ಸ್ವಯಂ ಪ್ರೇರಿತರಾಗಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹಳ್ಳಿಯಲ್ಲಿ ಸಂವಿಧಾನ ಹಬ್ಬದ ಸಡಗರ ಮನೆ ಮಾಡಿದೆ.
ಜಿಲ್ಲೆಯಲ್ಲಿ ಎರಡು ಸ್ತಬ್ದಚಿತ್ರ ವಾಹನಗಳು ಪ್ರತಿನಿತ್ಯ ಪ್ರತ್ಯೇಕ ಮಾರ್ಗದಲ್ಲಿ ನಾಲ್ಕೈದು ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸುತ್ತಿದೆ. ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮ, ತಜ್ಞರಿಂದ ಉಪನ್ಯಾಸ ಆಯೋಜಿಸಲಾಗುತ್ತಿದೆ. ವಿಶೇಷವಾಗಿ ಚಿಕ್ಕ ಮಕ್ಕಳಿಂದಲೆ ಸಭಿಕರಿಗೆ ಸಂವಿಧಾನ ಪೀಠಿಕೆ ಬೋಧಿಸಲಾಗುತ್ತಿದೆ. ಅಂಬೇಡ್ಕರ್ ಜೀವನ ಕುರಿತು ನಾಟಕ ಪ್ರದರ್ಶನವಾಗುತ್ತಿವೆ. ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರ ನಾಯಕರ ವೇಷ ಧರಿಸಿದ ಮಕ್ಕಳು, ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಯುವಕರು, ಸ್ಥಳೀಯ ಜನಪ್ರತಿನಿಧಿಗಳು ಹೀಗೆ ಎಲ್ಲರು ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ.
ಕಲಬುರಗಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಎಲ್ಲಾ ಭಾಗೀದಾರರ ಇಲಾಖೆಗಳು ಸಾಂಘಿಕ ಪ್ರಯತ್ನದಿಂದ ಕಾರ್ಯಕ್ರಮ ಸಂಘಟಿಸಿ ಜಿಲ್ಲೆಯ ಜನರಿಗೆ ಸಂವಿಧಾನದ ಪ್ರಸ್ತಾವನೆ, ಬಸವಣ್ಣನವರ ಸಮಾನತೆ ಸಂದೇಶ, ಭಾತೃತ್ವ ಭಾವನೆ ಬಿತ್ತುವ ಕೆಲಸ ಮಾಡುತ್ತಿದೆ. ಸಂವಿಧಾನದ ಮೂಲ ಆಶಯ ಪ್ರತಿಯೊಬ್ಬರಿಗೆ ತಲುಪಬೇಕೆಂಬುದು ಸರ್ಕಾರದ ಮೂಲ ಉದ್ದೇಶವನ್ನು ಜಿಲ್ಲೆಯಲ್ಲಿ ಅಕ್ಷರಸ ಜಾರಿಗೆ ತರಲಾಗುತ್ತಿದೆ.
169 ಗ್ರಾಮದಲ್ಲಿ ಸಂಚಾರ: ಜನವರಿ 26 ರಿಂದ ಫೆಬ್ರವರಿ 23ರ ವರೆಗೆ ಒಟ್ಟು 271 ಗ್ರಾಮದಲ್ಲಿ ಸಂಚಾರದ ಗುರಿ ಹೊಂದಿದ್ದು, ಫೆಬ್ರವರಿ 13ರ ವರೆಗೆ 169 ಗ್ರಾಮದಲ್ಲಿ ಜಾಗೃತಿ ಜಾಥಾ ಸಂಚರಿಸಿದೆ. ಇನ್ನು 102 ಗ್ರಾಮದಲ್ಲಿ ಸಂಚರಿಸಿ ಕೊನೆಯದಾಗಿ ಫೆಬ್ರವರಿ 25 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾವೇಶಕ್ಕೆ ಸ್ತಬ್ದಚಿತ್ರಗಳು ಪ್ರಯಾಣಿಸಲಿವೆ.
ಸ್ತಬ್ಧಚಿತ್ರದಲ್ಲಿ ಏನೇನು: ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರಗಳು ಭಾರತದ ಸಂವಿಧಾನ ಪೀಠಿಕೆ ವಾಚನ, ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಕಲ್ಪನೆ, ಬಸವಣ್ಣನವರ ವಚನಗಳು ಮತ್ತು ಭಾರತ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ, ಜಿಲ್ಲೆಯ ಐತಿಹಾಸಿಕ ಸ್ಥಳ, ಕಲೆ, ಸಂಸ್ಕøತಿ ಬಿಂಬಿಸುವುದರ ಜೊತೆಗೆ ಸಾಹಿತ್ಯ ದಿಗ್ಗಜರ ಪರಿಚಯ ಮಾಡಿಕೊಡಲಾಗುತ್ತಿದೆ. ಸುಂದರವಾದ ಸಂವಿಧಾನ ಶಿಲ್ಪಿಯ ಪ್ರತಿಮೆ ಸಹ ಇದರಲ್ಲಿ ಅಳವಡಿಸಿದೆ.
ಜಾಥಾಕ್ಕೆ ಭರ್ಜರಿ ಸ್ವಾಗತ, ಸಾಂಸ್ಕೃತಿಕ ಮೆರಗು: ಪ್ರತಿ ಗ್ರಾಮದಲ್ಲಿ ಜಾಥಾಕ್ಕೆ ಡೊಳ್ಳು, ಹಲಗೆ, ತಮಟೆ ಬಾರಿಸುವ ಮೂಲಕ, ಬೈಕ್ ರ್ಯಾಲಿ, ಸೈಕಲ್ ಜಾಥಾ ಮೂಲಕ ಭರ್ಜರಿ ಸ್ವಾಗತ ನೀಡಲಾಗುತ್ತಿದೆ. ಜೆ.ಸಿ.ಬಿ. ದಿಂದ ಜಾಥಾ ವಾಹನದ ಮೇಲೆ ಪುಷ್ಪ ಮಳೆ ಸುರಿಸಲಾಗುತ್ತಿದೆ. ತಡ ರಾತ್ರಿ ಬರುವ ಜಾಥಾಕ್ಕೆ ಕ್ಯಾಂಡಲ್ ಮಾರ್ಚ್‍ದೊಂದಿಗೆ ಬರಮಾಡಿಕೊಳ್ಳಲಾಗುತ್ತಿದೆ. ಶಾಲಾ ಮಕ್ಕಳ ಕೋಲಾಟ, ಲೇಜಿಮ್ ನೃತ್ಯ, ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ನೃತ್ಯ, ಗ್ರಾಮೀಣ ಕಲೆ ಪ್ರದರ್ಶನಕ್ಕೂ ಜಾಥಾ ಮೆರವಣಿಗೆ ವೇದಿಕೆಯಾಗಿ ಮಾರ್ಪಟ್ಟಿದಲ್ಲದೆ ಇದು ಜಾಥಾಕ್ಕೆ ಸಾಂಸ್ಕೃತಿಕ ಮೆರಗು ನೀಡಿದೆ.