ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಂವಿಧಾನದ ಆಶಯದಂತೆ ಸಮ ಸಮಾಜ ನಿರ್ಮಾಣ ಮಾಡಲು ನಾನು ಬದ್ದನಾಗಿದ್ದು ಇದಕ್ಕೆ ಆಡಳಿತ ವರ್ಗ ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ನಡೆದ ೭೫ನೇ ವರ್ಷದ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿದ ಸಂವಿಧಾನ ಜಗತ್ತಿಗೆ ಮಾದರಿಯಾಗಿದ್ದು ಅದನ್ನು ಅರಿತಿರುವ ನಮ್ಮ ಸರ್ಕಾರ ಅದನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ಸರ್ವರೂ ಸಮಾನತೆಯಿಂದ ಬದುಕು ನಡೆಸುವಂತಹ ಸಂವಿಧಾನ ರಚಿಸಿಕೊಟ್ಟಿರುವ ಸಂವಿಧಾನ ಶಿಲ್ಪಿಯನ್ನು ನಾವು ನಿತ್ಯ ನೆನೆದು ಗೌರವ ಸಲ್ಲಿಸಬೇಕೆಂದ ಶಾಸಕರು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಭರವಸೆಗಳನ್ನು ಜಾರಿಗೆ ತಂದಿದ್ದು ನಾವು ನುಡಿದಂತೆ ನಡೆದಿದ್ದೇವೆಂದು ತಿಳಿಸಿದರು.
ಕ್ಷೇತ್ರದ ವ್ಯಾಪ್ತಿಯ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸರ್ಕಾರ ಸೇರ್ಪಡೆ ಮಾಡಿದ್ದು ಪರಿಹಾರ ನೀಡಲು ಈಗಾಗಲೇ ಹಣ ಮಂಜೂರಾಗಿರುವುದರಿoದ ಪ್ರತಿಯೊಬ್ಬ ರೈತರು ತಪ್ಪದೆ ಎಫ್‌ಐಡಿ ನೊಂದಣಿ ಮಾಡಿಸಿ ಸವಲತ್ತು ಪಡೆಯಬೇಕು ಎಂದು ಹೇಳಿದರು
ಈ ವಿಚಾರದಲ್ಲಿ ಯಾವುದೇ ಮಾಹಿತಿ ಬೇಕಿದ್ದರು ತಾಲೂಕು ಕಛೇರಿ, ಕೃಷಿ ಇಲಾಖೆ ಮತ್ತು ಶಾಸಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಮುಂದೆ ಕೇಂದ್ರ ಸರ್ಕಾರದಿಂದಲೂ ಬರಪರಹಾರಕ್ಕೆ ಅನುದಾನ ಬರಲಿದ್ದು ಈ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ದಾರೆ ಎಂದು ನುಡಿದರಲ್ಲದೆ ಆನಂತರ ಪರಿಹಾರ ಹಣ ನಿಮ್ಮ ಕೈ ಸೇರಲಿರುವುದರಿಂದ ಯಾವ ರೈತರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಧೈರ್ಯ ತುಂಬಿದರು.
ತಾಲೂಕು ನಾಡ ಹಬ್ಬಗಳ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಪನ್ಯಾಸಕ ಡಿ.ಶ್ರೀನಿವಾಸ್, ಪ್ರಸೂತಿ ತಜ್ಞೆ ಡಾ.ದಿವ್ಯತಾ, ಶಿರಸ್ತೇದ್ದಾರ್ ಅಸ್ಲಂಭಾಷಾ, ಆರೋಗ್ಯ ಇಲಾಖೆಯ ಪ್ರಕಾಶ್, ಮತ್ತಿತರರನ್ನು ತಾಲೂಕು ಆಡಳಿತ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನಸೆಳೆದವು.
ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್, ಸದಸ್ಯರಾದ ಶಂಕರ್‌ಸ್ವಾಮಿ, ನಟರಾಜು, ಕೆ.ಬಿ.ವೀಣಾ, ಶಂಕರ್, ಮಾಜಿ ಸದಸ್ಯ ಕೆ.ವಿನಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯದ್‌ಜಾಬೀರ್, ಟಿಎಪಿಸಿಎಂಎಸ್ ನಿರ್ದೇಶಕ ದೊಡ್ಡಕೊಪ್ಪಲುರವಿ, ತಾ.ಪಂ. ಇಒ ಜಿ.ಕೆ.ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಸಿಡಿಪಿಒ ಅಣ್ಣಯ್ಯ, ಶಿಕ್ಷಣ ಸಂಯೋಜಕರಾದ ದಾಸಪ್ಪ, ಜಗದೀಶ್, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ ಮತ್ತಿತರರು ಹಾಜರಿದ್ದರು.