ಬೆಂಗಳೂರು: ಅಂಬೇಡ್ಕರ್ ಅವರು ಮತ್ತೆ ಹುಟ್ಟಿಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರು ಹೇಳಬೇಕಾಗಿರುವುದು ಅದಲ್ಲ, ಯಾವ ಆರ್‌ಎಸ್‌ಎಸ್ ನಾಯಕರು ಹೇಳಿದರೂ ಸಂವಿಧಾನ ಬದಲಾಯಿಸಲು ಸಾಧ್ಯ ಇಲ್ಲ ಎಂದು ಹೇಳಬೇಕಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೩ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, ನರೇಂದ್ರ ಮೋದಿಯವರೇ, ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲವೇ ಅವರ ಅನುಯಾಯಿಗಳಿಂದ ಅಲ್ಲ, ಅಪಾಯ ಎದುರಾಗಿರುವುದು ನಿಮ್ಮ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್ ಮತ್ತು ಅದರ ನಾಯಕರಿಂದ. ಇದಕ್ಕೆ ಇತಿಹಾಸ ಸಾಕ್ಷಿ ಇದೆ. ಇತಿಹಾಸವನ್ನು ಮರೆಯಬಾರದೆಂದು ನಮಗೆ ಪಾಠ ಮಾಡಿದವರು ಇದೇ ಬಾಬಾಸಾಹೇಬ್ ಅಂಬೇಡ್ಕರ್ ಎಂದು ತಿರುಗೇಟು ನೀಡಿದ್ದಾರೆ.
ನರೇಂದ್ರ ಮೋದಿಯವರೇ, ಬಾಬಾಸಾಹೇಬ್ ಅಂಬೇಡ್ಕರ್ ಅಧ್ಯಕ್ಷತೆಯ ಸಂವಿಧಾನ ರಚನಾ ಸಮಿತಿ ನೀಡಿದ ಕರಡು ಪ್ರತಿಯನ್ನು ನಮ್ಮ ದೇಶ ಅಂಗೀಕರಿಸಿದ್ದು ೧೯೪೯ರ ನವಂಬರ್ ೨೬ರಂದು. ಅದಾಗಿ ಕೇವಲ ನಾಲ್ಕೇ ದಿನಕ್ಕೆ ಅಂದರೆ ೧೯೪೯ರ ನವಂಬರ್ ೩೦ರಂದು ನಿಮ್ಮ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ಬರೆದಿರುವ ಈ ಸಂಪಾದಕೀಯದ ಬಗ್ಗೆ ಈಗಿನ ನಿಮ್ಮ ನಿಲುವು ಏನು ಇದನ್ನು ಒಪ್ಪುತ್ತೀರಾ ನಿರಾಕರಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ವೇದಗಳ ನಂತರ ನಮ್ಮ ಹಿಂದೂ ರಾಷ್ಟ್ರಕ್ಕೆ ಪೂಜನೀಯವಾದ ಗ್ರಂಥವೆಂದರೆ ಮನುಸ್ಮೃತಿಯಾಗಿದ್ದು, ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ ಸಂಪ್ರದಾಯ, ಆಲೋಚನೆಗಳು ಮತ್ತು ಆಚಾರಗಳಿಗೆ ಅದುವೇ ಆಧಾರವಾಗಿದೆ. ಶತಮಾನಗಳಿಂದ ನಮ್ಮ ದೇಶವು ಸಾಗಿಬಂದ ಆಧ್ಯಾತ್ಮಿಕ ಮತ್ತು ದೈವಿಕ ಪಥಗಳಿಗೆ ಈ ಕೃತಿಯೇ ಕ್ರೋಢೀಕೃತ ರೂಪವಾಗಿದೆ. ಇವತ್ತಿಗೂ ಕೋಟ್ಯಂತರ ಹಿಂದೂಗಳು ತಮ್ಮ ಜೀವನ ಮತ್ತು ಆಚರಣೆಗಳಲ್ಲಿ ಅನುಸರಿಸುತ್ತಿರುವ ಕಟ್ಟಳೆಗಳಿಗೆ ಈ ಮನುಸ್ಮೃತಿಯೇ ಮೂಲವಾಗಿದೆ. ಇವತ್ತು ಮನುಸ್ಮೃತಿಯೇ ಹಿಂದೂ ಕಾನೂನು ಎಂದು ಹೇಳಿದವರು ವಿನಾಯಕ ದಾಮೋದರ ಸಾವರ್ಕರ್ ಎಂದು ಹೇಳಿದ್ದಾರೆ.