ದಾವಣಗೆರೆ: ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 1950ರ ಜ. 26ರಿಂದ ಸಂವಿಧಾನ ಜಾರಿಯಾಗಿದ್ದು, 2024ರ ಜ. 26ರಂದು ಅಮೃತ ಮಹೋತ್ಸವ ದಿನ ಆಚರಿಸಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಸಂವಿಧಾನ ಜಾಗೃತಿ ರ್‍ಯಾಲಿ ಆಯೋಜಿಸಲು ಸರಕಾರ ಉದ್ದೇಶಿಸಿದೆ. ಸಂವಿಧಾನದ ಅಂಶಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಮಾಹಿತಿ ನೀಡಿದರು.
ಸಂವಿಧಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲಾ 194 ಗ್ರಾಮ ಪಂಚಾಯಿತಿಗಳು ಮತ್ತು 7 ನಗರ, ಸ್ಥಳೀಯ ಸಂಸ್ಥೆಗಳ ಕೇಂದ್ರದಲ್ಲಿ ಸಾಂವಿಧಾನಿಕ ಸ್ತಂಭ ಮೆರವಣಿಗೆ ನಡೆಸಲಾಗುವುದು. ಈ ರ್‍ಯಾಲಿ ಜಿಲ್ಲೆಯಲ್ಲಿ 27 ದಿನಗಳ ಕಾಲ ನಡೆಯಲಿದೆ. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಆಗಮಿಸಿ ಈ ವೇಳೆ ಸಂವಿಧಾನ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಕುರಿತು ವಿವಿಧ ಕಾರ್ಯಕ್ರಮ, ಉಪನ್ಯಾಸಗಳ ಅರಿವು ಮೂಡಿಸುವ ಮೂಲಕ ಸಂವಿಧಾನದ ಆಶಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಗ್ರಾ.ಪಂ., ಗ್ರಾಮಗಳ ನೇತೃತ್ವದಲ್ಲಿ ಸ್ವಾಗತ ಕೋರಲಾಗಿದ್ದು, ಮೆರವಣಿಗೆಯಲ್ಲಿ ನಾಗರಿಕರು, ಸಂಘ, ಸಂಸ್ಥೆಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಜ.26ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ರ್‍ಯಾಲಿಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.