Sunday, April 20, 2025
Google search engine

Homeರಾಜಕೀಯರಾಜ್ಯದಲ್ಲಿ 2367 ಶಾಲಾ ಶೌಚಾಲಯ ನಿರ್ಮಾಣ: ಶೌಚಾಲಯ ನಿರ್ಮಾಣ ಸಾಮಗ್ರಿಯಲ್ಲಿ ಗುಣಮಟ್ಟ ಕಾಪಾಡುವಂತೆ ಸಚಿವ ಪ್ರಿಯಾಂಕ್‌...

ರಾಜ್ಯದಲ್ಲಿ 2367 ಶಾಲಾ ಶೌಚಾಲಯ ನಿರ್ಮಾಣ: ಶೌಚಾಲಯ ನಿರ್ಮಾಣ ಸಾಮಗ್ರಿಯಲ್ಲಿ ಗುಣಮಟ್ಟ ಕಾಪಾಡುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ  ಯೋಜನೆಯಡಿ (ಎಂಜಿನರೇಗ) ಗ್ರಾಮೀಣ ಪ್ರದೇಶಗಳ ಶಾಲಾ ಆವರಣಗಳಲ್ಲಿ ನಿರ್ಮಿಸಲಾಗುತ್ತಿರುವ ಶೌಚಾಲಯಗಳಿಗೆ ಬಳಸುವ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ನಿನ್ನೆ ನಡೆದ (ಜನವರಿ 02) ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಧಿಕಾರಿಗಳ ವಿಡಿಯೋ ಸಭೆಯಲ್ಲಿ ಮಾತನಾಡಿದ ಸಚಿವರು ಶಾಲೆಗಳ ಶೌಚಾಲಯಗಳ ನಿರ್ಮಾಣದಲ್ಲಿ ಬಳಸುತ್ತಿರುವ ಸಾಮಗ್ರಿಗಳ ಗುಣಮಟ್ಟದಲ್ಲಿ ಸುಧಾರಣೆ ಆಗಬೇಕಾದ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು. ಪ್ರಸಕ್ತ ವರ್ಷ 6195 ಶಾಲಾ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು ಇವುಗಳಲ್ಲಿ 2367 ಶೌಚಾಲಯಗಳ ನಿರ್ಮಾಣ ಕೆಲಸ ಪೂರ್ಣಗೊಂಡಿದೆ ಎಂದು ಸಚಿವರಿಗೆ ಮಾಹಿತಿ ನೀಡಲಾಯಿತು.

ಗ್ರಾಮಗಳಲ್ಲಿ ಯುವಕರ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗುವಂತೆ ಆಟದ ಮೈದಾನಗಳ ನಿರ್ಮಾಣವಾಗಬೇಕಿದ್ದು, ಇದಕ್ಕಾಗಿ ಸೂಕ್ತ ಸ್ಥಳವನ್ನು ಗುರ್ತಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಆಯವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯದ 7424 ಶಾಲೆಗಳಿಗೆ ಕಾಂಪೌಂಡ್‌ ನಿರ್ಮಾಣ ಆಗಬೇಕಿದ್ದು ಈಗಾಗಲೆ 2968 ಶಾಲೆಗಳ ಕಾಂಪೌಂಡ್‌ ಪೂರ‍್ಣಗೊಂಡಿವೆ, ಪ್ರಗತಿಯಲ್ಲಿರುವ ಉಳಿದ ಕಾಮಗಾರಿಗಳ ನಿರ್ಮಾಣವನ್ನು ಚುರುಕುಗೊಳಿಸಿ ಮಾರ್ಚ್‌ ಅಂತ್ಯದ ಒಳಗೆ ಗುರಿ ಸಾಧನೆ ಮಾಡಬೇಕೆಂದು ಸಚಿವರು ಸೂಚನೆ ನೀಡಿದರು.

ಮುಂದಿನ ದಿನಗಳಲ್ಲಿ ಬರಗಾಲದ ತೀವ್ರತೆ ಹೆಚ್ಚಾಗಲಿದ್ದು, ಗ್ರಾಮೀಣ ಮಹಿಳೆಯರು, ಪರಿಶಿಷ್ಟ ಜಾತಿ ಪಂಗಡದವರು ಗುಳೆ ಹೋಗುವುದನ್ನು ತಡೆದು ನರೇಗ ಅಡಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕೆಂದು ನಿರ್ದೇಶನ ನೀಡಿದ ಸಚಿವರು ಗೋಮಾಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ವನಸಂರಕ್ಷಣೆ ಮಾಡಬೇಕೆಂದು ಹೇಳಿ, ಈ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯ ನೆರವು ಪಡೆಯಬೇಕೆಂದು ತಿಳಿಸಿದರು.

ನರೇಗ ಯೋಜನೆಯಡಿ ಪ್ರಸಕ್ತ ವರ್ಷ 1300 ಲಕ್ಷ ಮಾನವದಿನಗಳನ್ನು ಸೃಜಿಸುವ ಗುರಿ ಹೊಂದಿದ್ದು, 2023ರ ಡಿಸೆಂಬರ್‌ ಅಂತ್ಯಕ್ಕೆ 1112.80 ಲಕ್ಷ ಮಾನವದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿತ್ತು, ಡಿಸೆಂಬರ್‌ ಅಂತ್ಯಕ್ಕೆ 1153.25 ಮಾನವದಿನಗಳನ್ನು ಸೃಜಿಸಲಾಗಿದ್ದು ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ನರೇಗ ಆಯುಕ್ತ ಪವನ್‌ ಕುಮಾರ್‌ ಸಚಿವರಿಗೆ ತಿಳಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರವೇಜ್‌ ಮತ್ತಿತರ ಅಧಿಕಾರಿಗಳು ಸಭೆಯಲ್ಲಿದ್ದು ಸಚಿವರಿಗೆ ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular