ಕೊಡಗು: ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ತಲೆ ಎತ್ತುತ್ತಿದೆ. ಈಗಾಗಲೆ ಮೈದಾನ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
ಮೈದಾನ ನಿರ್ಮಾಣಕ್ಕೆ ಜಿಲ್ಲಾಡಳಿತ 12 ಎಕರೆ ಜಾಗ ನೀಡಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಮಾದರಿಯಲ್ಲಿ ಈ ಮೈದಾನ ನೈಸರ್ಗಿಕವಾಗಿ ತಲೆ ಎತ್ತಲಿದೆ. ವಿಶೇಷ ಅಂದರೆ, ಈ ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ತುಸು ದೊಡ್ಡದಾಗಿರಲಿದೆ. 50 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಮೈದಾನ ನಿರ್ಮಾಣವಾಗುತ್ತಿದೆ. ಬೆಟ್ಟವನ್ನು ಅರ್ಧ ಸಮತಟ್ಟುಗೊಳಿಸಿ ಮೈದಾನ ನಿರ್ಮಾಣ ಮಾಡಲಾಗುತ್ತಿದೆ.
ಮೈದಾನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮೈದಾನ ನಿರ್ಮಾಣ ಜಾಗದಲ್ಲಿ ಸ್ಮಶಾನವಿದೆ, ಯಾವುದೇ ಕಾರಣಕ್ಕೂ ಮೈದಾನ ಆಗಲು ಬಿಡುವುದಿಲ್ಲ ಎಂದು ಪ್ರತಿಭಟನೆ ಮಾಡಿದ್ದರು. ಇದು ಕೂಡ ಮೈದಾನ ನಿರ್ಮಾಣ ಕಾಮಗಾರಿ ನೆನಗುದಿಗೆ ಬೀಳಲು ಕಾರಣವಾಗಿತ್ತು.
ಆದರೆ, ಹಿಂದಿನ ಜಿಲ್ಲಾಧಿಕಾರಿ ಡಾ. ಬಿಸಿ ಸತೀಶ್ ಸಭೆ ಕರೆದು ಒಂದು ಎಕರೆ ಜಾಗವನ್ನ ಸ್ಮಶಾನಕ್ಕೆ ಮೀಸಲಿಟ್ಟು ಉಳಿದ ಜಾಗವನ್ನ ಕ್ರಿಕೆಟ್ ಮೈದಾನಕ್ಕೆ ಬಳಸಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಪೈಸಾರಿ ನಿವಾಸಿಗಳು ಮಾತ್ರ ತಮಗೆ ಎರಡು ಎಕರೆ ಜಾಗ ಬೇಕು ಅಂತ ಹಠಕ್ಕೆ ಬಿದ್ದಿದ್ದರು. ಆದರೆ, ಕೆಎಸ್ಸಿಎ ಸಿಬ್ಬಂದಿ ಮಾತ್ರ ಏನೇ ಆಗಲಿ ನಾವು ಮೈದಾನ ನಿರ್ಮಿಸಿಯೇ ತೀರುತ್ತೇವೆ ಅಂತ ಘೋಷಿಸಿದ್ದಾರೆ.
ಇದೀಗ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು ಕಾಮಗಾರಿ ಶುರುಮಾಡಲಾಗಿದೆ. ಈಗಾಗಲೇ ಜೆಸಿಬಿ, ಹಿತಾಚಿ ಯಂತ್ರಗಳು ಬಂದು ಮಣ್ಣು ಅಗೆಯಲು ಶುರು ಮಾಡಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಮೈದಾನ ಸಿದ್ದವಾಗಲಿದೆ. ಇದು ಸ್ಥಳೀಯ ಕ್ರೀಡಾಪಡುಗಳಿಗೆ ವರದಾನವಾಗಲಿದೆ.
ಕೊಡಗು ಜಿಲ್ಲೆಯಲ್ಲಿ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣವಿದೆ. ಆದರೆ, ಕನಿಷ್ಠ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸುವಂತಹ ಅಥ್ಲೆಟಿಕ್ ಕ್ರೀಡಾಂಗಣವಾಗಲಿ, ಕ್ರಿಕೆಟ್ ಮೈದಾನವಾಗಲಿ ಇಲ್ಲ. ಸದ್ಯ ಕ್ರಿಕೆಟ್ ಮೈದಾನ ತಲೆ ಎತ್ತುತ್ತಿದ್ದು, ಅದೇ ಮಾದರಿಯ ಅಥ್ಲೆಟಿಕ್ ಕ್ರೀಡಾಂಗಣ ನಿರ್ಮಾಣಕ್ಕೂ ಒಲವು ತೋರುವಂತೆ ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.