ಮೈಸೂರು: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಗೊಂಡಿರುವ ಬಾಲರಾಮ ಮೂರ್ತಿಯನ್ನು ಕೆತ್ತಿದವರು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಬಾಲರಾಮ ಮೂರ್ತಿಗೆ ಎಲ್ಲಿಯ ಶಿಲೆ ಬಳಸಲಾಗಿದೆ ಎನ್ನುವುದು ಕೆಲವರಿಗೆ ಮಾತ್ರ ಗೊತ್ತು. ಅದು ಮೈಸೂರಿನ ಜಯಪುರ ಹೋಬಳಿಯ ಹಾರೋಹಳ್ಳಿಯಲ್ಲಿ. ಇಂದು ಆ ಹಾರೋಹಳ್ಳಿಯಲ್ಲೂ ರಾಮದೇಗುಲ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ.
ಅಯೋಧ್ಯೆ ಇಂದು ಭಾರತದ ಕೋಟಿ ಕೋಟಿ ಭಕ್ತರ ಶ್ರದ್ಧಾ ಕೇಂದ್ರ. ಅಂಥ ಅಯೋಧ್ಯೆಯ ರಾಮಮಂದಿರದ ಸುಂದರ ಬಾಲರಾಮನ ಮೂರ್ತಿಯನ್ನು ಕೆತ್ತಲು ಶಿಲೆಗಾಗಿ ದೇಶಾದ್ಯಂತ ಹುಡುಕಾಟ ನಡೆಸಲಾಗಿತ್ತು. ಕಡೆಗೆ ಅದು ಸಿಕ್ಕಿದ್ದು ಮೈಸೂರಿನ ಜಯಪುರ ಹೋಬಳಿಯ ಹಾರೋಹಳ್ಳಿಯಲ್ಲಿ ಎನ್ನುವುದು ಹೆಮ್ಮೆಯ ವಿಷಯ. ಈಗ ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯಾದ ಒಂದು ವರ್ಷ್ಕಕ್ಕೆ ಸರಿಯಾಗಿ ಅದೇ ಹಾರೋಹಳ್ಳಿಯಲ್ಲೂ ರಾಮದೇಗುಲ ನಿರ್ಮಿಸಲಾಗುತ್ತಿದೆ.
ಹಾರೋಹಳ್ಳಿಯ ರಾಮದಾಸ್ ಎನ್ನುವವರ ಜಮೀನಿನಲ್ಲಿ ಬಾಲರಾಮ ಮೂರ್ತಿಯನ್ನು ಕೆತ್ತಲು ಬೇಕಾದ ಶಿಲೆ ಸಿಕ್ಕಿತ್ತು. ಇದನ್ನು ತಮ್ಮ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿರುವ ರಾಮದಾಸ್ ಕುಟುಂಬದವರು ಈಗ ಶಿಲೆ ಸಿಕ್ಕಿದ ಜಾಗದಲ್ಲಿ ತಮ್ಮ ಸ್ವಂತ ದುಡ್ಡಿನಲ್ಲಿ ರಾಮದೇಗುಲವನ್ನು ನಿರ್ಮಿಸುತ್ತಿದ್ದಾರೆ. ಇಂದು ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಎರಡು ದಿನಗಳಿಂದ ಜೆಸಿಬಿ ಯಂತ್ರಗಳ ಮೂಲಕ ಜಮೀನನ್ನು ಮಟ್ಟ ಮಾಡಲಾಗುತ್ತಿದೆ. ಶಿಲೆ ಸಿಕ್ಕ ಬಂಡೆಯ ಜೊತೆಗೆ ಇತರೆ ಬಂಡೆಗಳನ್ನು ತೆರವುಗೊಳಿಸಿ ದೇಗುಲ ನಿರ್ಮಾಣಕ್ಕೆ ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ. ಗ್ರಾಮದಿಂದ ದೇವಸ್ಥಾನ ನಿರ್ಮಾಣವಾಗುತ್ತಿರುವ ಜಾಗದವರೆಗೆ ರಸ್ತೆಯನ್ನು ಕಲ್ಪಿಸಲಾಗುತ್ತಿದೆ. ದೇಗುಲ ನಿರ್ಮಾಣಕ್ಕೆ ಸಂಸದ ಯದುವೀರ್ ಒಡೆಯರ್ ಚಾಲನೆ ನೀಡಲಿದ್ದಾರೆ. ಸಂಜೆ ಲಕ್ಷದೀಪೋತ್ಸವ ನಡೆಯುತ್ತದೆ.