ಬೆಂಗಳೂರು:ತಮಿಳುನಾಡಿಗೆ ಸಡ್ಡು ಹೊಡೆದು ರಾಜ್ಯದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ರಾಜ್ಯಸರ್ಕಾರ ಮುಂದಾಗಿದ್ದು, ಈಗಾಗಲೇ ಸ್ಥಳ ಆಯ್ಕೆಯೂ ಸೇರಿದಂತೆ ಹಲವು ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗಿನ ಒಪ್ಪಂದದ ಪ್ರಕಾರ, 2032 ರವರೆಗೂ ಮತ್ತೊಂದು ವಿಮಾನನಿಲ್ದಾಣ ನಿರ್ಮಿಸಲು ಅವಕಾಶ ಇಲ್ಲ. 2033 ರ ನಂತರ ವಿಮಾನನಿಲ್ದಾಣ ಸ್ಥಾಪನೆಗೆ ಯಾವುದೇ ಅಡ್ಡಿ ಇಲ್ಲ ಎಂದರು.
ಆದರೂ ರಾಜ್ಯಸರ್ಕಾರಕ್ಕೆ ವಿಶೇಷ ರಿಯಾಯಿತಿಗಳಿವೆ. ಎಕ್ಸ್ಕ್ಯೂಸ್ಲೀವ್ ಕ್ಲಾಸ್ ನಿಯಮಾವಳಿಗಳ ಅನುಸಾರವೇ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸ್ಥಾಪನೆಗೆ ನಿರ್ಧರಿಸಲಾಗಿದೆ.ಕೆಲದಿನಗಳ ಹಿಂದೆ ಮೂಲಭೂತ ಸೌಕರ್ಯ ಇಲಾಖೆಯ ಸಭೆ ನಡೆಸಲಾಗಿದ್ದು, 2033 ರವರೆಗೂ ಕಾಯುವ ಅಗತ್ಯವಿಲ್ಲ. ಇದರ ನಡುವೆ ಭೂಸ್ವಾಧೀನ, ಸ್ಥಳ ಆಯ್ಕೆ ಸೇರಿದಂತೆ ಇತರ ಮಾನದಂಡಗಳ ಪರಿಶೀಲನೆ ಆರಂಭವಾಗಿದೆ ಎಂದರು.
2ನೇ ವಿಮಾನನಿಲ್ದಾಣದ ನಿರ್ಮಾಣಕ್ಕೆ ಈಗಾಗಲೇ ಅಸ್ತಿತ್ವದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸಂಪರ್ಕವನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಳ್ಳಬೇಕೇ? ಅಥವಾ ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಬೇಕೇ? ಎಂಬ ಗೊಂದಲಗಳಿವೆ.
ಈ ಗೊಂದಲವನ್ನು ಮೊದಲು ಪರಿಹರಿಸಿಕೊಳ್ಳಬೇಕಿದೆ. ಇದಕ್ಕಾಗಿ ಚರ್ಚೆಗಳು ನಡೆಯುತ್ತಿವೆ. ಅಧಿಕಾರಿಗಳಿಗೂ ವರದಿ ನೀಡಲು ಸೂಚಿಸಲಾಗಿದೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಐದಾರು ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಎರಡನೇ ಸಭೆ ನಡೆಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಬಳಿಕ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು ಎಂದರು.
ನಾವು ಸಭೆ ನಡೆಸಿದ ಮೇಲೆ ತಮಿಳುನಾಡು ಸರ್ಕಾರವೂ ಕೂಡ ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಹೇಳಿದೆ. ಅವರಿಗೆ ಯಾವ ಮಾನದಂಡಗಳು ಅವಕಾಶ ಕಲ್ಪಿಸುತ್ತವೆ ಎಂಬುದನ್ನು ನೋಡಬೇಕಿದೆ ಎಂದರು.