ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ತೆಗೆದುಕೊಂಡಿರುವ ತೀರ್ಮಾನಗಳಿಂದ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಪೂರೈಕೆಯಲ್ಲಿ ತೀವ್ರ ತೊಂದರೆ ಉಂಟಾಗಿದ್ದು ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಿದೆ. ಇದರಿಂದ ಕಾರ್ಮಿಕರು, ಗುತ್ತಿಗೆದಾರರು, ಸಾರ್ವಜನಿಕರಿಗೆ ತೀವ್ರ ಸಮಸ್ಯೆಯುಂಟಾಗಿ ಕೆಲಸವೇ ಇಲ್ಲದ ವಾತಾವರಣ ನಿರ್ಮಾಣವಾಗಿದ್ದಲ್ಲದೇ, ಅಭಿವೃದ್ಧಿ ಕಾರ್ಯಗಳಿಗೂ ತೀವ್ರ ಹಿನ್ನಡೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ಮರಳು ನೀತಿ ಮಾಡುತ್ತೇವೆ ಅಂತ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗುತ್ತಾ ಬಂದರೂ ಈ ಬಗ್ಗೆ ಸ್ಪಷ್ಟ ಕಾನೂನು ರೂಪಿಸಿಲ್ಲವಾದ್ದರಿಂದ ಈಗಲೂ ಸಹ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಒಂದಾದರೂ ಸಭೆ ನಡೆಸಿದೆಯಾ? ಕ್ಷೇತ್ರದ ಶಾಸಕನಾಗಿರುವ ನನಗಂತೂ ಈ ಬಗ್ಗೆ ಯಾವ ಮಾಹಿತಿಯೂ ಬಂದಿಲ್ಲ. ಕೇರಳದಲ್ಲಿ ಒಂದು ಟನ್ ಕೆಂಪು ಕಲ್ಲಿಗೆ 32 ರೂ. ರಾಯಲ್ಟಿ ಇದ್ದರೆ, ಕರ್ನಾಟಕದಲ್ಲಿ 282 ರೂ. ಇದೆ. ಹಾಗಾಗಿ ಕೇರಳದಿಂದ ಉಳ್ಳಾಲ ಕಡೆಗೆ ಅಕ್ರಮ ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿಯೂ ಇದೆ. ಹೀಗೆ
ನಮ್ಮ ಜಿಲ್ಲೆಯಲ್ಲಿ ಸಮಸ್ಯೆಗಳ ಸರಮಾಲೆ ಮೂಲಕ ತೀವ್ರ ಆರ್ಥಿಕ ಸಂಕಷ್ಟ ತಂದಿರುವುದು ಕಾಂಗ್ರೆಸ್ಸಿನ ಮತ್ತೊಂದು ಗ್ಯಾರಂಟಿ ಎಂದರು.
ಉಸ್ತುವಾರಿ ಸಚಿವರು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಕ್ಕೆ ಇಲ್ಲಿ ನಡೆಯಲಿದ್ದ ಹೋರಾಟವನ್ನು ಪ್ರತಿಭಟನಾಕಾರರು ಮುಂದೆ ಹಾಕಿದ್ದಾರೆ. ಆದರೆ ಇದು ಕೇವಲ ಒಂದು ವಾರದೊಳಗೆ ಬಗೆಹರಿಯುವ ಸಮಸ್ಯೆಯಾ? ಈ ಬಗ್ಗೆ ಗಣಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರ್ಕಾರದ ಮಟ್ಟದಲ್ಲಿಯೇ ನಿಯಮ ಸಡಿಲಿಕೆಯಾಗುವವರೆಗೆ ನಾವೇನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರವೇ ಇಲ್ಲಿ ಕೃತಕ ಅಭಾವ ಸೃಷ್ಟಿಸಿ ಜನಸಾಮಾನ್ಯರನ್ನು ತೊಂದರೆಗೀಡು ಮಾಡಿರುವುದು ಸಾಬೀತಾಗುತ್ತಿದ್ದು ಜನಸಾಮಾನ್ಯರ ಶಾಪ ತಟ್ಟದೇ ಬಿಡದು. ಕೂಡಲೇ ಜನರಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಿ ಎಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದರು.