ಬಳ್ಳಾರಿ: ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಬಹಳ ಸಹಾಯಕವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್ ಝುಬೇರ್ ಅವರು ಹೇಳಿದರು.
ನಗರದ ಜಂಟಿ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ ೨೦೨೫ರ ಪ್ರಯುಕ್ತ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆಯನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಬೇಕಾಗಿದೆ. ಸಜ್ಜೆ, ಜೋಳ, ರಾಗಿ, ಮತ್ತು ನವಣೆ ಸೇರಿದಂತೆ ಮುಂತಾದ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ಆಹಾರಗಳ ಲಾಭ ಉಪಯುಕ್ತತೆ ಮತ್ತು ಬಳಕೆ ಕುರಿತಂತೆ ಹೆಚ್ಚಿನ ರೀತಿಯಲ್ಲಿ ವ್ಯಾಪಕ ಅರಿವು ಮೂಡಿಸುವ ದಿಶೆಯಲ್ಲಿ ಈ ರೀತಿಯ ಸ್ಪರ್ಧೆಗಳು ಬಹಳಷ್ಟು ಉಪಯೋಗಕಾರಿ ಎಂದು ತಿಳಿಸಿದರು.
ವಿದೇಶಿ ಆಹಾರ ಪದಾರ್ಥಗಳಾದ ಪಿಜ್ಜಾ, ಬರ್ಗರ್ ಮತ್ತು ಡೊಮಿನೋಸ್ ಮತ್ತು ಎಣ್ಣೆ ಪದಾರ್ಥ ಸೇವಿಸುವುದು ಆರೋಗ್ಯ ಪೂರಕವಲ್ಲ. ಪಾಕ ಸ್ಪರ್ಧೆಗೆ ಮಾತ್ರ ಸಿರಿಧಾನ್ಯ ಪದಾರ್ಥಗಳು ಸೀಮಿತವಾಗಬಾರದು. ನಿಮ್ಮ ಮನೆಗಳಲ್ಲಿ ಸಹ ಪ್ರತಿದಿನ ಸಿರಿಧಾನ್ಯಗಳಿಂದ ವಿವಿಧ ಬಗೆಯ ಪದಾರ್ಥಗಳು ತಯಾರಿಸಿ, ನಿಮ್ಮ ಮಕ್ಕಳಿಗೆ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಸೋಮ ಸುಂದರ್, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ಎನ್.ಕೆಂಗೇಗೌಡ, ಹಗರಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಶಿಲ್ಪಾ, ರಾಜೇಶ್ವರಿ, ಬಳ್ಳಾರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ದಯಾನಂದ ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿ ವರ್ಗ ಮತ್ತು ಮಹಿಳೆಯರು ಉಪಸ್ಥಿತರಿದ್ದರು.