Saturday, April 19, 2025
Google search engine

HomeUncategorizedವನ್ಯಪ್ರಾಣಿಗಳ ನಿರಂತರ ದಾಳಿ: ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನಾ ಧರಣಿ

ವನ್ಯಪ್ರಾಣಿಗಳ ನಿರಂತರ ದಾಳಿ: ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನಾ ಧರಣಿ

ರಾಮನಗರ: ವನ್ಯಪ್ರಾಣಿಗಳ ನಿರಂತರ ದಾಳಿ-ಹಾವಳಿಯಿಂದ ಉಂಟಾಗುತ್ತಿರುವ ಮಾನವ ಪ್ರಾಣಹಾನಿ, ಅಂಗವಿಕಲತೆ, ಗಾಯ ಹಾಗೂ ಸಾಕು ಪ್ರಾಣಿಗಳ ಪ್ರಾಣಹಾನಿ ಮತ್ತು ರೈತರ ಬೆಳೆ, ಆಸ್ತಿಪಾಸ್ತಿ ನಷ್ಟಕ್ಕೆ ಶಾಶ್ವತ ಪರಿಹಾರ ಕ್ರಮ ಕೈಗೊಂಡು ರೈತರು ಮತ್ತು ರೈತರ ಬೆಳೆ, ಆಸ್ತಿ ಪಾಸ್ತಿಯನ್ನು ಉಳಿಸಬೇಕೆಂದು ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸಿ ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿಗಳ (ವನ್ಯಜೀವಿ) ಕಛೇರಿ ಮುಂದೆ ಇದೇ ಜುಲೈ ೨೮ರಂದು ಶುಕ್ರವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅವರು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವನ್ಯಪ್ರಾಣಿಗಳ ದಾಳಿ ಮತ್ತು ಹಾವಳಿಯಿಂದ ರಾಮನಗರ ಜಿಲ್ಲೆಯಲ್ಲಿ ಕಳೆದ ೭ ವರ್ಷಗಳಿಂದ ಆಗಿರುವ ಮಾನವ ಪ್ರಾಣಹಾನಿ, ಅಂಗವಿಕಲತೆ, ಗಾಯ ಹಾಗೂ ಸಾಕುಪ್ರಾಣಿಗಳ ಪ್ರಾಣಹಾನಿ, ರೈತರ ಬೆಳೆ, ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಅಂಕಿ ಅಂಶಗಳನ್ನು ತೆರೆದಿಟ್ಟ ಅವರು, ಸರ್ಕಾರ ನಿಗಧಿ ಪಡಿಸಿರುವ ಪರಿಹಾರ ಧನ ಅವೈಜ್ಞಾನಿಕವಾಗಿದ್ದು ಆ ದಿನದ ಪ್ರತಿಭಟನೆಯಲ್ಲಿ ವನ್ಯಪ್ರಾಣಿಗಳ ದಾಳಿ ಮತ್ತು ಹಾವಳಿಯಿಂದ ಮಾನವ ಪ್ರಾಣಹಾನಿ, ಸಾಕುಪ್ರಾಣಿಗಳ ಪ್ರಾಣಹಾನಿ ಮತ್ತು ಬೆಳೆ ನಷ್ಟ, ಆಸ್ತಿಪಾಸ್ತಿ ನಷ್ಟಕ್ಕೆ ಒಳಗಾಗಿರುವ ರೈತರು ಭಾಗವಹಿಸುತ್ತಿದ್ದು ವನ್ಯಪ್ರಾಣಿಗಳ ದಾಳಿ-ಹಾವಳಿಯನ್ನು ತಡೆಯಲಾಗದೇ ಕಂಗಲಾಗಿ, ಜಮೀನಿನಲ್ಲಿ ಬೆಳೆ ಬೆಳೆಯದೇ ನಮ್ಮ ಜಮೀನು ಪಹಣಿಯನ್ನು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನೀಡಿ, ನಮ್ಮ ಜಮೀನನ್ನು ಪಡೆದುಕೊಂಡು ವರ್ಷದಲ್ಲಿ ಬೆಳೆಯುತ್ತಿದ್ದ ಬೆಳೆಗೆ ವ್ಶೆಜ್ಞಾನಿಕ ದರದ ರೂಪದಲ್ಲಿ ಪರಿಹಾರ ಕೊಡಬೇಕೆಂದು ಅಗ್ರಹಿಸಲಾಗುವುದು ಎಂದು ತಿಳಿಸಿದರು.
೨೦೧೭ರಿಂದ ೨೦೨೩ರ ವರೆಗೆ ಜಿಲ್ಲೆಯಲ್ಲಿ ಆನೆಗಳು ೨೧ ಮಂದಿ ಮೇಲೆ ದಾಳಿ ಮಾಡಿದ್ದು ಅವರಲ್ಲಿ ೧೧ ಮಂದಿ ಸಾವನ್ನಪ್ಪಿದ್ದಾರೆ. ೧೦ ಮಂದಿ ಅಂಗವಿಕಲರಾಗಿದ್ದಾರೆ. ರೈತರ ಕೋಟ್ಯಾಂತರ ರೂ. ಬೆಲೆಯ ಮಾವು, ತೆಂಗು, ಬಾಳೆ, ರಾಗಿ, ರೇಷ್ಮೆ ಬೆಳೆ ಮುಂತಾದ ಬೆಳೆಗಳು ನಾಶವಾಗಿದೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ. ಕರಡಿ ದಾಳಿಗೆ ೩೧ ಮಂದಿ ಒಳಗಾಗಿದ್ದು ೫ ಮಂದಿ ಒಳಗಾಗಿದ್ದಾರೆ. ಹಲವರು ಶಾಶ್ವತ ಅಂಗವಿಕಲರಾಗಿದ್ದಾರೆ. ಚಿರತೆ ದಾಳಿಗೆ ೧೫ ಮಂದಿ ಒಳಗಾಗಿದ್ದು ಆ ಪೈಕಿ ೪ ಮಂದಿ ಸಾವಿಗೀಡಾಗಿದ್ದಾರೆ. ಲಕ್ಷಾಂತರ ರೂ.ಬೆಲೆಯ ಹಸು, ಕರು, ಎಮ್ಮೆ, ಕುರಿ ಮೇಕೆ ಸೇರಿದಂತೆ ಹಲವು ಸಾಕುಪ್ರಾಣಿಗಳ ಪ್ರಾಣಹಾನಿ ಆಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಸುಮಾರು ೧೧ ವರ್ಷಗಳಿಂದ ವನ್ಯಪ್ರಾಣಿಗಳ ದಾಳಿ ಹಾವಳಿಯಿಂದ ಸುಮಾರು ೨೦೦ ಕೋಟಿ ರೂ. ನಷ್ಟವಾಗಿದೆ ಆದರೆ ಸರ್ಕಾರ ೨೦೧೩ರಿಂದ ೨೩ರ ವರೆಗೆ ಅಂದರೆ ೧೧ ವರ್ಷದಲ್ಲಿ ವನ್ಯಪ್ರಾಣಿಗಳ ಮಾನವ ಪ್ರಾಣಹಾನಿಗೆ ಒಳಗಾದವರಿಗೆ ೧ ಕೋಟಿ ೩ ಲಕ್ಷ ರೂ. ಗಾಯಗೊಂಡವರಿಗೆ ೫೪ ಲಕ್ಷದ ೨೬ ಸಾವಿರದ ೫೭೨ ಹಾಗೂ ಬೆಳೆನಷ್ಟಕ್ಕೆ ೭ ಕೋಟಿ,೧೩ ಲಕ್ಷದ ೧೨ ಸಾವಿರದ ೩೬೪ ರೂ. ಆಸ್ತಿ ಪಾಸ್ತಿ ನಷ್ಟಕ್ಕೆ ೪೧,ಲಕ್ಷದ ೮೩ ಸಾವಿರದ ೫೮೦ ರೂ. ಹಾಗೂ ಸಾಕುಪ್ರಾಣಿಗಳಾದ ಹಸು, ಕರು, ಎಮ್ಮೆ, ಕುರಿ ಮೇಕೆ ಸೇರಿದಂತೆ ಹಲವು ಸಾಕುಪ್ರಾಣಿಗಳ ಪ್ರಾಣಹಾನಿಗೆ ೨ ಕೋಟಿ ೩೫ ಲಕ್ಷದ ೩೩ ಸಾವಿರದ ೫೬೦ ರೂ, ಒಟ್ಟು ೧೭ ಕೋಟಿ, ೩೬ಲಕ್ಷದ ೩೧ ಸಾವಿರದ ೬೨೪ ರೂ. ಪರಿಹಾರವನ್ನು ನೀಡಿದೆ. ಇದು ಆನೆ ಹೊಟ್ಟೆಗೆ ಅರೆ ಮಜ್ಜಿಗೆ ಎನ್ನುವಂತಾಗಿದೆ ಎಂದು ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅವರು ಸರ್ಕಾರದ ಅವ್ಶೆಜ್ಞಾನಿಕ ಪರಿಹಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
ಜಿಲ್ಲಾಡಳಿತ ಮತ್ತು ಸರ್ಕಾರ ಒಂದು ತಿಂಗಳ ಒಳಗೆ ನಮ್ಮ ಈ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದೆ ಪ್ರಥಮ ಹಂತದಲ್ಲಿ ಕಕಜವೇ ಕಾರ್ಯಕರ್ತರು ಮತ್ತು ರೈತರನ್ನೊಳಗೊಂಡು ಚನ್ನಪಟ್ಟಣ ತಾಲ್ಲುಕಿನ ಸಿಂಗರಾಜಿಪುರ ಗ್ರಾಮದಿಂದ ಚನ್ನಪಟ್ಟಣದ ವರೆಗೆ ಪಾದಯಾತ್ರೆ ಮಾಡಲಾಗುವುದು. ಅದಕ್ಕೂ ಸಮ್ಮತಿಸದಿದ್ದರೆ ಚನ್ನಪಟ್ಟಣದಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಪಾದಯಾತ್ರೆಯನ್ನು ಮಾಡಲಾಗುವುದು. ಮೂರನೇ ಹಂತದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಿಂದ ಅರಣ್ಯ ಸಚಿವರ ಮನೆಯವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅವರು ಎಚ್ಚರಿಕೆ ನೀಡಿದರು.
ಇದೇ ದಿನ ಬೆಳಿಗ್ಗೆ ೧೦ ಗಂಟೆಗೆ ಜಾನಪದ ಲೋಕದ ಬಳಿ ಇರುವ ಡಾ. ಬಾಲ ಗಂಗಾಧರನಾಥ ಸ್ವಾಮೀಜಿಗಳ ಅಂಧರ ಮಠದಲ್ಲಿ ನೂರಾರು ಕಾರ್ಯಕರ್ತರನ್ನು ವೇದಿಕೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮ, ಬಳಿಕ ವಿವಿಧ ಕ್ಷೇತ್ರ ಗಣ್ಯರಿಗೆ ಬಿರುದು ಪ್ರಧಾನ ಆನಂತರ ಅಂಧ ಮಕ್ಕಳಿಗೆ ಹಣ್ಣು ಸಿಹಿ ವಿತರಣೆ ಮತ್ತು ಗಿಡ ಹಂಚಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷರಾದ ಬೆಂಕಿಶ್ರೀಧರ್, ರಂಜಿತ್ ಗೌಡ ಮತ್ತು ಜಿಲ್ಲಾಧ್ಯಕ್ಷರ ಯೋಗೀಶಗೌಡ, ಸಾಂಸ್ಕೃತಿಕ ಘಟಕದ ರ‍್ಯಾಂಬೋ ಸೂರಿ ತಿಳಿಸಿದರು.

RELATED ARTICLES
- Advertisment -
Google search engine

Most Popular