ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಾಗಿದ್ದು, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಭಾರೀ ಮಳೆ ಮತ್ತು ಭೂಕುಸಿತ ವರದಿಯಾಗಿದೆ.
ಇಂದು ಬುಧವಾರ ಕರ್ನಾಟಕದಾದ್ಯಂತ ವರುಣನ ಆರ್ಭಟ ಮತ್ತಷ್ಟು ಹೆಚ್ಚಾಗಲಿದ್ದು, ೫ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ, ಉತ್ತರಕನ್ನಡಕ್ಕೆ ಆರೆಂಜ್ ಅಲರ್ಟ್, ಬೆಳಗಾವಿ, ಮೈಸೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸಕಲೇಶಪುರ ತಾಲೂಕಿನ ದೊಡ್ಡತಪ್ಪಾಲೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಘಾಟ್ ರಸ್ತೆಯಲ್ಲಿ ಮಂಗಳವಾರ ಭೂಕುಸಿತ ಉಂಟಾಗಿದ್ದು ಹಲವು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿತ್ತು. ಇದರಿಂದಾಗಿ ಹೆದ್ದಾರಿಯಲ್ಲಿ ಹಲವು ಪ್ರಯಾಣಿಕರು ಗಂಟೆಗಟ್ಟಲೆ ಪರದಾಡುವಂತಾಯಿತು. ಭಾರೀ ಮಳೆಗೆ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿದಿದ್ದು, ಒಂದು ಟ್ರಕ್ ಪಲ್ಟಿಯಾಗಿದ್ದು, ಮೂರು ವಾಹನಗಳು ಅವಶೇಷಗಳಲ್ಲಿ ಸಿಲುಕಿಕೊಂಡಿವೆ.
ಇಡೀ ರಸ್ತೆ ಕೆಸರಿನಿಂದ ಆವೃತವಾದ ಕಾರಣ, ಕರಾವಳಿ ಪ್ರದೇಶ ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಜನನಿಬಿಡ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಕೆಎಸ್‌ಆರ್ಟಿಸಿ ಬಸ್ಗಳು ಗಂಟೆಗಟ್ಟಲೆ ನಿಂತಿದ್ದವು. ಅವಶೇಷಗಳನ್ನು ತೆರವುಗೊಳಿಸಲು ಭಾರೀ ಮಣ್ಣು ತೆಗೆಯುವ ಯಂತ್ರಗಳನ್ನು ನೇಮಿಸಲಾಗಿದೆ. ಶಿರಾಡಿ ಘಾಟ್ ಮಾರ್ಗವನ್ನು ಮಂಗಳವಾರ ಮತ್ತೆ ಸಂಚಾರಕ್ಕೆ ಮುಚ್ಚಲಾಗಿದ್ದು, ಜುಲೈ ೨೬ ರಿಂದ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಸಂಪರ್ಕವನ್ನು ಸ್ಥಗಿತಗೊಳಿಸಿರುವುದರಿಂದ, ಮಂಗಳೂರು ಮತ್ತೆ ಸಂಪರ್ಕ ಸಮಸ್ಯೆಗಳನ್ನು ಎದುರಿಸುತ್ತಿದೆ.
ದಕ್ಷಿಣ ಕನ್ನಡದ ಜೀವನಾಡಿ ನೇತ್ರಾವತಿ ನದಿಯಲ್ಲಿ ಉಕ್ಕಿ ಹರಿಯುತ್ತಿದ್ದು, ಉಪ್ಪಿನಂಗಡಿ ಬಳಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದೆ.
ಕಾವೇರಿ ದಡದ ಕರಡಿಗೋಡು ಗ್ರಾಮದ ಜನರನ್ನು ಜಿಲ್ಲಾಡಳಿತ ಸ್ಥಳಾಂತರಿಸಿದ್ದು, ಹಲವರನ್ನು ಸಿದ್ದಾಪುರಕ್ಕೆ ಸ್ಥಳಾಂತರಿಸಲಾಗಿದೆ. ಭಾಗಮಂಡಲದ ಕಾಶಿ ಮಠದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಎರಡು ಕುಟುಂಬದ ಏಳು ಜನರನ್ನು ಸ್ಥಳಾಂತರಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ೪೮ ಗಂಟೆಗಳ ಕಾಲ ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಿಸಿದೆ.