Saturday, April 19, 2025
Google search engine

Homeರಾಜ್ಯಮುಂದುವರಿದ ಮಳೆ: ತುಂಬಿ ಹರಿಯುತ್ತಿರುವ ನದಿಗಳು

ಮುಂದುವರಿದ ಮಳೆ: ತುಂಬಿ ಹರಿಯುತ್ತಿರುವ ನದಿಗಳು

ಬೆಳಗಾವಿ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ನದಿ ಮತ್ತು ಅದರ ಉಪನದಿಗಳಿಗೆ ಭಾರೀ ಪ್ರಮಾಣದ ನೀರಿನ ಒಳಹರಿವು ಮುಂದುವರಿದಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ೪೧ ಸೇತುವೆಗಳು , ೩೦೦ ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ

ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಕಡಿಮೆಯಾಗಿದೆ. ಹಲವಾರು ಅಣೆಕಟ್ಟುಗಳಿಂದ ನದಿಗೆ ನೀರು ಬಿಡಲಾಗುತ್ತಿದೆ. ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಧಾರಾಕಾರ ಮಳೆಯಾಗಿದೆ. ಪಟ್ಟಣದ ಇಸ್ಕಾನ್ ಕೇಂದ್ರಕ್ಕೆ ಮಲಪ್ರಭಾ ನದಿ ನೀರು ನುಗ್ಗಿದೆ. ಕೇಂದ್ರದಲ್ಲಿರುವ ವಿಗ್ರಹಗಳು ಮತ್ತು ಇತರ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳು ಜಲಾವೃತವಾಗಿವೆ.

ಹುಕ್ಕೇರಿ ತಾಲೂಕಿನ ಹೆಬ್ಬಾಳ ಬಳಿ ರಾಷ್ಟ್ರೀಯ ಹೆದ್ದಾರಿ-೪೮ರಲ್ಲಿ ರಸ್ತೆ ಜಲಾವೃತಗೊಂಡಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಹಿರಣ್ಯಕೇಶಿ ನದಿಯು ಸಂಕೇಶ್ವರ ಪಟ್ಟಣಕ್ಕೆ ನುಗ್ಗಿ ಹಲವಾರು ಮನೆಗಳನ್ನು ಆವರಿಸಿದೆ. ವೇದಗಂಗಾ ಮತ್ತು ದೂಧಗಂಗಾ ನದಿಗಳಲ್ಲಿ ಪ್ರವಾಹದಿಂದಾಗಿ ನಿಪ್ಪಾಣಿಯಲ್ಲಿ ೨೨೦ ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಬಾಗಲಕೋಟೆಯಲ್ಲಿ ತುಂಬಿ ಹರಿಯುತ್ತದ್ದ ಕೃಷ್ಣಾ ನದಿಯಲ್ಲಿ ೫೪ ವರ್ಷದ ರೈತ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಸಿಬ್ಬಂದಿ ದೋಣಿಗಳನ್ನು ಬಳಸಿ ಹುಡುಕಾಟ ಆರಂಭಿಸಿದ್ದಾರೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭಾಧ್ರಾ ನದಿಯ ಒಳಹರಿವು ಹೆಚ್ಚುತ್ತಲೇ ಇದೆ.

ಹಾಸನ ಜಿಲ್ಲೆಯಲ್ಲೂ ಮಳೆ ಕೊಂಚ ಬಿಡುವು ನೀಡಿತ್ತು. ಹೇಮಾವತಿ ನದಿಯ ಒಳಹರಿವು ೫೦,೦೦೦ ಕ್ಯುಸೆಕ್ ಇತ್ತು. ಸಕಲೇಶಪುರ ಹೊಳೆಮಲ್ಲೇಶ್ವರ ದೇಗುಲ ಜಲಾವೃತವಾಗಿದ್ದು, ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ಶಿರಾಡಿ ಘಾಟ್‌ನಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-೭೫ರಲ್ಲಿ ವಾಹನಗಳು ಸಿಲುಕಿಕೊಂಡಿವೆ.

ಯಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಉಂಟಾಗಿದ್ದು, ಮಂಗಳೂರು-ಬೆಂಗಳೂರು ನಡುವೆ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

RELATED ARTICLES
- Advertisment -
Google search engine

Most Popular