ಢಾಕಾ: ಮೀಸಲಾತಿ ಹೋರಾಟ ಹಿಂಸೆಗೆ ತಿರುಗಿದ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಅವರು ಪ್ರಧಾನಿ ಪಟ್ಟ ತೊರೆದು, ಭಾರತಕ್ಕೆ ಪರಾರಿಯಾದ ಬಳಿಕ ಬಾಂಗ್ಲಾದೇಶದಲ್ಲಿ ಅರಾಜಕತೆ ವಿಕೋಪಕ್ಕೆ ಹೋಗಿದೆ. ಠಾಣೆಗಳಿಂದ ಪೊಲೀಸರು ಓಡಿ ಹೋಗಿದ್ದು, ಕಾನೂನು-ಸುವ್ಯವಸ್ಥೆ ಕುಸಿದಿದೆ. ಬ್ಯಾಂಕುಗಳು ಬಾಗಿಲು ತೆರೆದರೆ ಜನರು ಲೂಟಿಗೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಬ್ಯಾಂಕ್‌ನ ಆರು ಮಂದಿ ಉನ್ನತ ಅಧಿಕಾರಿಗಳೇ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಬ್ಯಾಂಕುಗಳು ಬಂದ್ ಆಗಿವೆ.
ಮತ್ತೊಂದೆಡೆ, ಕೈಗಾರಿಕೆಗಳು ಅದರಲ್ಲೂ ಗಾರ್ಮೆಂಟ್ ಫ್ಯಾಕ್ಟರಿಗಳು ಬಾಗಿಲು ತೆರೆಯಲು ಯತ್ನಿಸುತ್ತಿದ್ದಂತೆ ದೊಂಬಿಕೋರರು ನುಗ್ಗಿ ದಾಂಧಲೆ ನಡೆಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಫ್ಯಾಕ್ಟರಿಗಳು ಕಾರ್ಯನಿರ್ವಹಿಸಲು ಆಗುತ್ತಿಲ್ಲ. ಮತ್ತೊಂದೆಡೆ, ಶೇಖ್ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್‌ನ ನಾಯಕರು, ಮುಖಂಡರನ್ನು ಗುರಿಯಾಗಿಸಿ ಕೊಲ್ಲಲಾಗುತ್ತಿದೆ. ಅಲ್ಪಸಂಖ್ಯಾತರಾದ ಹಿಂದುಗಳ ಮನೆ, ಉದ್ದಿಮೆ ಹಾಗೂ ದೇಗುಲಗಳಲ್ಲೂ ವಿಧ್ವಂಸಕ ಕೃತ್ಯ ಎಸಗಲಾಗುತ್ತಿದೆ.
ಪೊಲೀಸ್ ಠಾಣೆಗಳು ಹಾಗೂ ಸಂಬಂಧಿಸಿದ ಸ್ಥಳಗಳ ಮೇಲೆ ದೇಶಾದ್ಯಂತ ದಾಳಿಗಳು ನಡೆದಿವೆ. ಹೀಗಾಗಿ ಹಲವು ಪೊಲೀಸರು ಸಾವಿಗೀಡಾಗಿದ್ದಾರೆ. ಆದ ಕಾರಣ ಠಾಣೆಗೆ ಕರ್ತವ್ಯಕ್ಕೆ ಪೊಲೀಸರು ಬರುತ್ತಿಲ್ಲ. ಈ ನಡುವೆ, ಸಂಚಾರ ನಿರ್ವಹಣೆ ಕೂಡ ಸಮಸ್ಯೆಯಾಗಿದೆ. ಪೊಲೀಸರು ಇಲ್ಲದ ಕಾರಣ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಏತನ್ಮಧ್ಯೆ ಪೊಲೀಸರ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸಂಚಾರ ನಿರ್ವಹಣೆ ಮಾಡಲು ಯತ್ನಿಸಿದ್ದಾರೆ. ಇದೇ ವೇಳೆ, ಪೊಲೀಸರು ಕರ್ತವ್ಯಕ್ಕೆ ಮರಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎ.ಕೆ.ಎಂ ಶಾಹಿದುರ್ ರಹಮಾನ್ ಮನವಿ ಮಾಡಿದ್ದಾರೆ.