ಗುಂಡ್ಲುಪೇಟೆ: ಗಿರಿಜನರು ಅರಣ್ಯದೊಡನೆ ನಿರಂತರ ಸಂಪರ್ಕದಲ್ಲಿದ್ದು, ಅರಣ್ಯ ಮತ್ತು ವನ್ಯಪ್ರಾಣಿಗಳ ಉಳಿವಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್ ತಿಳಿಸಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಮತ್ತು ಫೋಟೋ ಜರ್ನಲಿಸಂ ಅಕಾಡೆಮಿ, ಮೈಸೂರು ರವರ ಸಹಯೋಗದಲ್ಲಿ ನಡೆದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಬುಡಕಟ್ಟು ಜನಾಂಗದ ಮಕ್ಕಳಿಗಾಗಿ 2 ದಿನಗಳ ಚಿತ್ರಕಲಾ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಅರಣ್ಯ ವಾಸಿಗಳಾಗಿದ್ದ ಕಾರಣ ಬುಡಕಟ್ಟು ಜನಾಂಗ ತನ್ನದೇ ಆದ ಕಲೆ, ಸಾಹಿತ್ಯ ಮತ್ತು ಸಂಸ್ಸೃತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ನಾನಾ ಕಾರಣಗಳಿಗೆ ಬುಡಕಟ್ಟು ಜನಾಂಗದ ಕಲೆಗಳು ನಶಿಸುತ್ತಿವೆ. ಅದನ್ನು ಉಳಿಸಿ ಬೆಳೆಸುವ ಹಾಗೂ ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡುವ ಹೊಣೆಗಾರಿಕೆಯು ನಮ್ಮೆಲ್ಲರದಾಗಿದೆ. ಇದನ್ನು ಮನಗಂಡು 2 ದಿನಗಳ ಚಿತ್ರ ಕಲಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ವಿಭಿನ್ನವಾಗಿ ಚಿತ್ರ ಕಲೆಯನ್ನು ಅಭಿವ್ಯಕ್ತ ಮಾಡಿದ್ದಾರೆ. ಇಂತಹ ಕಾರ್ಯಕ್ರಮಗಳು ಬುಡಕಟ್ಟು ಮಕ್ಕಳಿಗೆ ಅನುಕೂಲ ಉಂಟು ಮಾಡುತ್ತವೆ. ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಬುಡಕಟ್ಟು ಜನಾಂಗದ ಕಲೆಗಳ ಹಿನ್ನಲೆ, ಬೆಳೆದು ಬಂದ ರೀತಿ ಅತ್ಯಂತ ಮಹತ್ವದ್ದಾಗಿದ್ದು, ಅವುಗಳನ್ನು ಉಳಿಸಿ ಬೆಳೆಸಬೇಕಾದ ಮಾರ್ಗದ ಕಡೆಗೆ ಎಲ್ಲರೂ ಚಿಂತಿಸೋಣ ಎಂದು ಸಲಹೆ ನೀಡಿದರು.
ಬಂಡೀಪುರ ವ್ಯಾಪ್ತಿಯ ಮದ್ದೂರುಕಾಲೋನಿ, ಕಾರೇಮಾಳ, ಚನ್ನಿಕಟ್ಟೆ, ಮೇಲುಕಾಮನಹಳ್ಳಿಹಾಡಿ, ಕೆಬ್ಬೇಪುರ, ಬಾಚಹಳ್ಳಿ ಹಾಡಿಗಳ ಮಕ್ಕಳು ಪಾಲ್ಗೊಂಡಿದ್ದರು.
ಶ್ರೀಕಲಾ ನಿಕೇತನ ಸ್ಕೂಲ್ ಆಫ್ ಆರ್ಟ್, ಮೈಸೂರಿನ ಪ್ರಾಂಶುಪಾಲ ಮಹದೇವಶೆಟ್ಟಿ, ಬಂಡೀಪುರ, ಗುಂಡ್ಲುಪೇಟೆ ಮತ್ತು ಹೆಡಿಯಾಲ ಉಪವಿಭಾಗಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಎನ್.ನವೀನ್, ಜಿ.ರವೀಂದ್ರ, ಕೆ.ಪರಮೇಶ್, ವಲಯ ಅರಣ್ಯಾಧಿಕಾರಿ ದೀಪಾ, ಛಾಯ ಚಿತ್ರಕಲಾವಿದ ಎಂ.ಆರ್.ಮಂಜುನಾಥ, ಡಾ.ವಿಠಲರೆಡ್ಡಿಚುಳಕಿ, ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್ನ ಪದಾಧಿಕಾರಿಗಳು ಹಾಜರಿದ್ದರು.