Monday, December 2, 2024
Google search engine

Homeರಾಜ್ಯನಿರಂತರ ಮಳೆ, ಚಳಿಗಾಳಿ: ಐದು ಜಿಲ್ಲೆಗಳ ಶಾಲಾ-ಕಾಲೇಜಿಗೆ ರಜೆ

ನಿರಂತರ ಮಳೆ, ಚಳಿಗಾಳಿ: ಐದು ಜಿಲ್ಲೆಗಳ ಶಾಲಾ-ಕಾಲೇಜಿಗೆ ರಜೆ

ಬೆಂಗಳೂರು: ತಮಿಳುನಾಡಿಗೆ ಹೊಂದಿಕೊಂಡಿರುವ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಸೋಮವಾರ ಬೆಳಿಗ್ಗೆಯಿಂದ ಮಳೆ ಮತ್ತು ಚಳಿಗಾಳಿ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಚಂಡಮಾರುತದ ಪರಿಣಾಮವಾಗಿ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳೂ ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ. ಅಲ್ಲದೆ ದಕ್ಷಿಣಕನ್ನಡ, ಉಡುಪಿ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಗೂ ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

ಬೆಂಗಳೂರಿನಲ್ಲಿ ಭಾನುವಾರದಿಂದಲೇ ನಿರಂತರ ಮಳೆಯಾಗುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. ಆದರೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

ಬೆಂಗಳೂರಿನಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ, ಅಂಡರ್ಪಾಸ್ಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ಜೊತೆಗೆ ಬೆಳಿಗ್ಗೆಯಿಂದಲೇ ಮಳೆ ಜೋರಾಗಿರುವುದರಿಂದ ಕಚೇರಿ ಮತ್ತು ಶಾಲಾಕಾಲೇಜುಗಳಿಗೆ ತೆರಳುವವರು ಪರದಾಡುವಂತಾಯಿತು.

ಫೆಂಗಲ್ ಚಂಡಮಾರುತದಿಂದಾಗಿ ಮೈಸೂರು ಜಿಲ್ಲೆಯಲ್ಲಿ ಕೂಡ ನಿರಂತರ ಮಳೆ, ವಿಪರೀತ ಚಳಿಯ ವಾತಾವರಣ ಇದ್ದು ಆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಚಂಡಮಾರುತದಿಂದಾಗಿ ಜಿಲ್ಲೆಯಾದ್ಯಂತ ಮಳೆ ಮತ್ತು ವಿಪರೀತ ಚಳಿಯ ವಾತಾವರಣ ಇರುವ ಹಿನ್ನೆಲೆಯಲ್ಲಿ ಮಕ್ಕಳ ಹಿತವನ್ನು ಗಮನದಲ್ಲಿಟ್ಟಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಹೇಳಿದ್ದಾರೆ.

ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ಜಡಿ ಮಳೆ ಮತ್ತು ವಿಪರೀತ ಚಳಿ ಹಿನ್ನೆಲೆ ಕೋಲಾರ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ಸೋಮವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ. ಈ ರಜೆಯನ್ನು ಮತ್ತೊಂದು ರಜಾ ದಿನದಲ್ಲಿ ತರಗತಿ ನಡೆಸಿ ಸರಿದೂಗಿಸುವಂತೆ ಅವರು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular